ಕರ್ನಾಟಕಪ್ರಮುಖ ಸುದ್ದಿ

18 ವರ್ಷ ಮೇಲ್ಪಟ್ಟವರು ನಾಳೆ ಲಸಿಕೆಗಾಗಿ ಆಸ್ಪತ್ರೆಗೆ ಬರಬೇಡಿ: ಸಚಿವ ಸುಧಾಕರ್

ಬೆಂಗಳೂರು,ಏ.30-ನಾಳೆಯಿಂದ (ಮೇ 1) 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನವನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯಾರೂ ಲಸಿಕೆ ಪಡೆಯಲು ಆಸ್ಪತ್ರೆಗಳಿಗೆ, ಲಸಿಕಾ ಕೇಂದ್ರಗಳಿಗೆ ಬರಬೇಡಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಘೋಷಿಸಿರುವಂತೆ 18 ವರ್ಷದಿಂದ 44 ವರ್ಷದೊಳಗಿನವರಿಗೆ ಮೇ 1ರಿಂದ ಲಸಿಕೆ ನೀಡುವ ಅಭಿಯಾನ ಆರಂಭವಾಗಬೇಕಿತ್ತು. ಅದರ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಮೂರರಿಂದ ಮೂರೂವರೆ ಕೋಟಿ ಜನರು ಫಲಾನುಭವಿಗಳು ಇದ್ದಾರೆ ಎಂದು ಅಂದಾಜು ಮಾಡಿದ್ದೇವೆ. ಈಗಾಗಲೇ ಸರ್ಕಾರ 400 ಕೋಟಿ ರೂಪಾಯಿಗಳನ್ನು ಲಸಿಕೆ ತಯಾರಿಕಾ ಕಂಪೆನಿ ಸೆರಂ ಇನ್ಸ್ಟಿಟ್ಯೂಟ್ ಗೆ ನೀಡಿ 1 ಕೋಟಿ ಡೋಸ್ ಗೆ ಆರ್ಡರ್ ನೀಡಿದ್ದೇವೆ. ಭಾರತ್ ಬಯೋಟೆಕ್ ಕಂಪೆನಿ, ರಷ್ಯಾ ಮೂಲದ ಕಂಪೆನಿಗೆ ಸಹ ಆರ್ಡರ್ ನೀಡಿದ್ದು ಅವಿನ್ನೂ ಯಾವಾಗ ಲಸಿಕೆ ಕಳುಹಿಸಿಕೊಡುತ್ತವೆ ಎಂದು ಅಧಿಕೃತವಾಗಿ ಹೇಳಿಲ್ಲ ಎಂದರು.

ಲಸಿಕೆ ಯಾವಾಗ ರಾಜ್ಯಕ್ಕೆ ಬರುತ್ತದೆ ಎಂದು ಕಂಪೆನಿಯಿಂದ ಅಧಿಕೃತವಾದ ಮಾಹಿತಿ ಸರ್ಕಾರಕ್ಕೆ ಬಂದಿಲ್ಲ. ಹೀಗಾಗಿ ಮೊನ್ನೆ 28ರಿಂದ ಕೋವಿಡ್ ಪೋರ್ಟಲ್ ನಲ್ಲಿ ಯಾರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೋ ಅವರು ನಾಳೆಯಿಂದ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡುವವರೆಗೆ ಅಲ್ಲಿಯವರೆಗೆ ಯಾವ ಆಸ್ಪತ್ರೆ ಬಳಿ ಹೋಗಬೇಡಿ, ಲಸಿಕೆ ಅಭಿಯಾನ ಆರಂಭವಾಗುವ ದಿನವನ್ನು ಮುಂದಿನ ದಿನಗಳಲ್ಲಿ ನಾವೇ ರಾಜ್ಯದ ಜನತೆಗೆ ತಿಳಿಸುತ್ತೇವೆ ಎಂದಿದ್ದಾರೆ.

18 ವರ್ಷದಿಂದ 44 ವರ್ಷದೊಳಗಿನವರಿಗೆ ರಾಜ್ಯದ ಜನತೆಗೆ ಸರ್ಕಾರ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದು ಖಂಡಿತ. ಇದರಲ್ಲಿ ಯಾವುದೇ ಗೊಂದಲ ಬೇಡ. ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಬಹುದು, ಅದೇ ರೀತಿ 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳದವರು ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಸಹ ಸಚಿವರು ಮನವಿ ಮಾಡಿಕೊಂಡಿದ್ದಾರೆ.(ಎಂ.ಎನ್)

 

Leave a Reply

comments

Related Articles

error: