ಪ್ರಮುಖ ಸುದ್ದಿ

ಸೆಕ್ಯುರಿಟಿ ತ್ಯಜಿಸಿ ಎಂದು ಪ್ರಿಯಾಂಕಾಗೆ ಹೇಳಿ ನೋಡೋಣ: ರಾಯರೆಡ್ಡಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ನವದೆಹಲಿ: ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ವಿರುದ್ಧ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

“ನಿಮ್ಮದೇ ಪಕ್ಷದ ನಾಯಕಿದಾದ ಸೋನಿಯಾ ಗಾಂಧಿಯವರು ಯುಪಿಎ ಸರ್ಕಾರವಿದ್ದಾಗ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಕೈಗೊಂಬೆ ಮಾಡಿಕೊಂಡು ಅಧಿಕಾರ ಚಲಾಯಿಸಿದ್ದಾರೆ. ರಾಜೀವ್ ಗಾಂಧಿಯವರ ಮಗಳು ಎಂಬ ಒಂದೇ ಕಾರಣಕ್ಕಾಗಿ ಕಳೆದ 26 ವರ್ಷಗಳಿಂದ ಝಡ್ ಪ್ಲಸ್ ಸೆಕ್ಯುರಿಟಿ ಅನುಭವಿಸುತ್ತಿರುವ ಪ್ರಿಯಾಂಕಾ ಗಾಂಧಿ ಮತ್ತು ಅವರ ಪತಿ ರಾಬರ್ಟ್ ವಾಧ್ರಾ ಅವರಿಗೆ ಈ ಮಾತನ್ನು ಮೊದಲು ಹೇಳುವಿರಾ ಎಂದು ಸಿಂಹ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಬೇಕೆಂದರೆ ತಮಗೆ ನೀಡಿರುವ ರಕ್ಷಣೆ ತ್ಯಜಿಸಲಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ರಾಯರೆಡ್ಡಿಯವರು ನೀಡಿದ್ದರು. ಈ ಬಗ್ಗೆ ಪ್ರತಾಪ್ ಸಿಂಹ ಅವರು ಸೆಲ್ಫೀ ವಿಡಿಯೋ ಬಿಡುಗಡೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ ಅವರು, “ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಅಧಿಕಾರಕ್ಕಾಗಿ ಹಪಹಪಿಸಿದ ಪಕ್ಷ ನಿಮ್ಮದು. ಅಧಿಕಾರಕ್ಕಾಗಿ ಬಿಜೆಪಿ ಎಂದೂ ಹಪಹಪಿಸಿಲ್ಲ. ಹೀಗಾಗಿ ನಾವು ಅಧಿಕಾರಕ್ಕಾಗಿ ಸಾಯುವ ಪ್ರಶ್ನೆ ಬರುವುದೇ ಇಲ್ಲ. ಬಿಜೆಪಿ ದೇಶಕ್ಕಾಗಿ ಮತ್ತು ಕಾಶ್ಮೀರದ ರಕ್ಷಣೆಗಾಗಿ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ದೀನ ದಯಾಳ್ ಉಪಾಧ್ಯಾಯ ಅವರ ಬಲಿದಾನ ಮಾಡಿದೆ. ದೇಶದಲ್ಲಿ ಸಿಖ್ಖರ ಹತ್ಯೆ ನಡೆಸಿದವರು ನಿಮ್ಮಪಕ್ಷದವರೇ ಹೊರತು ಬಿಜೆಪಿಯವರಲ್ಲ. ಕಾರಿನ ಮೇಲಿನ ಕೆಂಪು ದೀಪ ತೆಗೆಯುವ ಆದೇಶ ನೀಡಿದ ಮಾತ್ರಕ್ಕೇ ಇಂತಹ ಹೇಳಿಕೆ ನೀಡಿರುವ ನೀವು ನಿಮ್ಮ ಹುದ್ದೆಯ ಘನತೆಗೆ ತಕ್ಕ ಹಾಗೇ ವರ್ತಿಸಬೇಕು” ಎಂದು ಕಿಡಿಕಾರಿದ್ದಾರೆ.

ರಕ್ಷಣೆ ಬೇಡವೆಂದಿದ್ದರು ಪ್ರಿಯಾಂಕ! ಪ್ರಸ್ತುತ ವಾಧ್ರಾಗೆ ರಕ್ಷಣೆ ಒದಗಿಸಿಲ್ಲ !

ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಹೊಸತರಲ್ಲಿ ಗಣ್ಯರ ರಕ್ಷಣಾ ವ್ಯವಸ್ಥೆ ಪರಿಷ್ಕರಣೆ ಮಾಡಲಾಗಿದ್ದು, ಪ್ರಿಯಾಂಕ ಪತಿ ರಾಬರ್ಟ್ ವಾಧ್ರಾ ಅವರಿಗೆ ನೀಡಿದ್ದ ರಕ್ಷಣೆಯನ್ನು ಹಿಂಪಡೆಯಲಾಗಿದೆ.

ಪ್ರಿಯಾಂಕ ಗಾಂಧಿ ವಾಧ್ರಾ ತಮಗೆ ನೀಡಿರುವ ರಕ್ಷಣೆಯನ್ನು ಬೇಡವೆಂದು ನಿರಾಕರಿಸಿದ್ದರು. ಪತಿ ರಾಬರ್ಟ್ ವಾಧ್ರಾ ಅವರಿಗೆ ನೀಡಿರುವ ರಕ್ಷಣೆಯನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಹಿಂಪಡೆದ ಕಾರಣ ಪ್ರಿಯಾಂಕ ತನ್ನ ಪತಿಗಿಲ್ಲದ ರಕ್ಷಣಾ ವ್ಯವಸ್ಥೆ ತಮಗೂ ಬೇಡವೆಂದು ನಿರಾಕರಿಸಿದ್ದರು. ಈ ವೇಳೆ ಬಿಜೆಪಿ ನಾಯಕರೇ ಪ್ರಿಯಾಂಕ ಅವರಿಗೆ ಕಿವಿಮಾತು ಹೇಳಿ ರಕ್ಷಣೆ ವಿಷಯದಲ್ಲಿ ಹುಡುಗಾಡವಾಡುವುದು ತರವಲ್ಲ ಎಂದು ಉದ್ಘರಿಸಿದ್ದರು.

ಈ ಘಟನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರಿಗೆ ತಿಳಿದಿಲ್ಲವೇ ಎನ್ನುವುದು ಯಕ್ಷಪ್ರಶ್ನೆ.

(ಎನ್.ಬಿ.ಎನ್)

Leave a Reply

comments

Related Articles

error: