ಮೈಸೂರು

ಕೊರೊನಾ ಸಂಕಷ್ಟದಲ್ಲಿ ಸರ್ಕಾರವನ್ನು ಹೊಣೆಗಾರರಾಗಿಸುವುದಕ್ಕಿಂತ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರೋಣ : ಸಂದೇಶ ಸ್ವಾಮಿ

ಮೈಸೂರು, ಮೇ.1:- ‘ನಮ್ಮ ಸುರಕ್ಷತೆ, ನಮ್ಮ ಜವಾಬ್ದಾರಿ ಎನ್ನುವುದನ್ನು ತಿಳಿದುಕೊಂಡು ನಾವೆಲ್ಲಾ ಎಚ್ಚರಿಕೆಯಿಂದ ಇರೋಣ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು
ಕೊರೊನಾ ನಿಯಂತ್ರಣ ಮೀರಿ ವ್ಯಾಪಿಸುತ್ತಿದ್ದು ನಮ್ಮ ಮೈಸೂರಿನಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಸೋಂಕು ನಿಯಂತ್ರಿಸುವ ಉದ್ದೇಶದಿಂದ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರಿಂದ ತುಂಬಾ ಜನರಿಗೆ ತೊಂದರೆಯಾಗುವುದು ಸತ್ಯ. ಆದರೆ ನಮ್ಮ ಜೀವದ ಜೊತೆಗೆ ನಮ್ಮವರ ಜೀವ ಉಳಿಯಬೇಕಾದರೆ ಕೆಲ ದಿನಗಳ ಕಾಲ ಕಷ್ಟ ಅನುಭವಿಸಲೇಬೇಕು. ಕೊರೊನಾ ಪರೀಕ್ಷೆ, ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಐಸಿಯು ವ್ಯವಸ್ಥೆ ಹೀಗೆ ಅಗತ್ಯ ಸೇವೆಗೆ ಸರ್ಕಾರ ಪ್ರಯತ್ನಿಸುತ್ತಿದೆಯಾದರೂ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ನಿರ್ವಹಣೆ ಕಷ್ಟವಾಗಿದೆ.
ವೈದ್ಯರು, ಶುಶ್ರೂಷಕರು, ಡಿ ಗ್ರೂಪ್ ನೌಕರರು ಸೇರಿದಂತೆ ಕೋವಿಡ್ ಸೋಂಕಿತರ ಆರೈಕೆ ಹಾಗೂ ಇನ್ನಿತರ ಕಾರ್ಯನಿರ್ವಹಣೆಯಲ್ಲಿರುವ ಸಿಬ್ಬಂದಿಗೆ ಕಾರ್ಯದೊತ್ತಡ ತುಂಬಾ ಜಾಸ್ತಿಯಾಗಿದೆ. ಈ ಸಂದರ್ಭದಲ್ಲಿ ಯಾವ ಸರ್ಕಾರವಿದ್ದರೂ ನಿರ್ವಹಣೆ ಸುಲಭಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಸರ್ಕಾರವನ್ನು ಹೊಣೆ ಮಾಡುವುದಕ್ಕಿಂತ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಿದೆ. ಇದು ರಾಜಕೀಯ ಮಾಡುವ ಸಂದರ್ಭವಲ್ಲ. ಎಲ್ಲರೂ ಜನರ ಪ್ರಾಣರಕ್ಷಣೆಗೆ ಸಾಧ್ಯವಾದಷ್ಟು ಸಹಕಾರ ನೀಡಬೇಕಿದೆ. ಇನ್ನು 15ದಿನ ಅನಗತ್ಯವಾಗಿ ಓಡಾಡದೆ ಮನೆಯಲ್ಲೇ ಇರೋಣ. ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಏನಾದರೂ ರೋಗ ಲಕ್ಷಣಗಳಿದ್ದರೆ ತಕ್ಷಣ ಪ್ರತ್ಯೇಕವಾಗಿದ್ದು, ಪರೀಕ್ಷೆ ಮಾಡಿಸಿಕೊಳ್ಳುವುದು ಹೀಗೆ ಪ್ರಾಥಮಿಕ ಕ್ರಮಗಳನ್ನು ಅನುಸರಿಸುವ ಮೂಲಕ ಸುರಕ್ಷಿತವಾಗಿ ಬದುಕೋಣ ಎಂದು  ಕೋರಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: