ಕರ್ನಾಟಕಪ್ರಮುಖ ಸುದ್ದಿಮೈಸೂರು

ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ಮೈಸೂರಿನಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಿಲ್ಲ ಎಂಬ ಆರೋಪ: ಜಿಲ್ಲಾಡಳಿತ ಸ್ಪಷ್ಟನೆ

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸಾವು

ಮೈಸೂರು/ಚಾಮರಾಜನಗರ,ಮೇ 3-ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟಿರುವ ಕುರಿತು ಸ್ಪಷ್ಟನೆ ನೀಡಿರುವ ಮೈಸೂರು ಜಿಲ್ಲಾಡಳಿತ ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ ಮಾಡಿಲ್ಲ ಎಂದಿದೆ.

ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಆಮ್ಲಜನಕ ಸಿಲಿಂಡರ್ ಖಾಲಿಯಾದ ಪರಿಣಾಮ 24 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಾತ್ರಿ 9 ಗಂಟೆಗೆ ಮೈಸೂರಿನಿಂದ ಸಿಲಿಂಡರ್‌ಗಳು ಬರಬೇಕಿತ್ತು. ಆದರೆ ಮೈಸೂರಿಂದ ಹೊರ ಜಿಲ್ಲೆಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಹಾಗಾಗಿ ಸಿಲಿಂಡರ್ ಬಂದಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಇದೀಗ ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ನಿನ್ನೆ ರಾತ್ರಿ 12.30 ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು‌ 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿ ಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಅದನ್ನು ಸರಿಯಾದ ಸಮಯದಲ್ಲಿ ಬಂದಿದ್ದೇಯಾ ಇಲ್ಲವೋ ಗೊತ್ತಿಲ್ಲ. ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ವಿಳಂಬ ಮಾಡಿಲ್ಲ. ನಾವು ಅಧಿಕೃತ ವಾಗಿ 250 ಆಕ್ಸಿಜನ್ ಸಿಲಿಂಡರ್ ನಿನ್ನೆ ಮಧ್ಯರಾತ್ರಿಯ ವೇಳೆಗೆ ಕಳಿಸಿರೋದು ದಾಖಲೆಯಲ್ಲಿದೆ. ಮೈಸೂರಿನ ಸೌತ್ರನ್ ಗ್ಯಾಸ್ ನಿಂದ 210 ಹಾಗೂ ಮೈಸೂರು ಜಿಲ್ಲಾ ಆಸ್ಪತ್ರೆಯಿಂದ 40 ಆಕ್ಸಿಜನ್ ಗ್ಯಾಸ್ ಸಿಲಿಂಡರ್ ಚಾಮರಾಜ ನಗರಕ್ಕೆ ನಿನ್ನೆ ಮಧ್ಯರಾತ್ರಿಯೇ ರವಾನೆಯಾಗಿದೆ ಎಂದು ಮಾಹಿತಿ ನೀಡಿದೆ.

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಮೃತರ ನಿಖರ ಸಂಖ್ಯೆಯನ್ನು ಆಸ್ಪತ್ರೆ, ಜಿಲ್ಲಾಡಳಿತ ಮುಚ್ಚಿಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೈಸೂರಿನಿಂದ ಸಿಲಿಂಡರ್ ಪೂರೈಕೆಯಾಗದೇ ಇದ್ದುದರಿಂದ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿತ್ತು. ಕೊನೆ ಕ್ಷಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮಧ್ಯಪ್ರವೇಶಿಸಿ 50 ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದ್ದರಿಂದ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಅವರು, ಈ ಕುರಿತಂತೆ ಚಾಮರಾಜನಗರ ಡಿಸಿ ಮತ್ತು ಮೈಸೂರಿನ ಆಮ್ಲಜನಕ ಸರಬರಾಜು ಹೊಣೆ ಹೊತ್ತಿರುವ ಎಡಿಸಿ ನಾಗರಾಜ್ ಅವರ ಜೊತೆ ಕಾನ್ಫರೆನ್ಸ್ ಕಾಲ್ ಮೂಲಕ ಮಾತುಕತೆ ನಡೆಸಿದ್ದು, ಸದ್ಯಕ್ಕೆ, 50 ಸಿಲಿಂಡರ್ ಕೊಟ್ಟು, ಸ್ಟಾಕ್ ಬಂದ ಬಳಿಕ ವಾಪಸ್ ಪಡೆಯುವುದಾಗಿ ಹೇಳಿದ್ದರು.

ಕೋವಿಡ್ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್‌ಗಳಿವೆ, 53 ಐಸಿಯು ಹಾಗೂ 55 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಬಹುತೇಕ ಎಲ್ಲವೂ ಭರ್ತಿಯಾಗಿವೆ. ಆಮ್ಲಜನಕ ಪೂರೈಕೆ ಇಲ್ಲದೇ ಎಲ್ಲರಿಗೂ ಸಮಸ್ಯೆಯಾಗಿದೆ ಎಂಬುದು ಗೊತ್ತಾಗಿದೆ. ಆಸ್ಪತ್ರೆಯಲ್ಲಿ‌ ಆವರಣದಲ್ಲಿ ನಿರ್ಮಾಣವಾಗಿರುವ 6000 ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕದ ಆಮ್ಲಜನಕವು ಒಂದೂವರೆ ದಿನಕ್ಕೆ ಬರುತ್ತಿದೆ. ಭಾನುವಾರ ಸಂಜೆ ಖಾಲಿಯಾಗಿದೆ.

ಈ ಮಧ್ಯೆ, ಆಸ್ಪತ್ರೆಗೆ ಜಿಲ್ಲಾಧಿಕಾರಿ‌ ಡಾ.ಎಂ.ಆರ್.ರವಿ, ಎಸ್ ಪಿ ದಿವ್ಯಾ ಸಾರಾ ಥಾಮಸ್ ಭೇಟಿ ನೀಡಿದ್ದು, ವೈದ್ಯರೊಂದಿಗೆ ಚರ್ಚ ನಡೆಸುತ್ತಿದ್ದಾರೆ. ಸಭೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರೂ ಭಾಗಿಯಾಗಿದ್ದಾರೆ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: