ಮೈಸೂರು

ಹತ್ತು ಕೆಜಿ ಬದಲು 2ಕೆಜಿ ಅಕ್ಕಿ ನೀಡುತ್ತಿರುವುದನ್ನು ವಿರೋಧಿಸಿ ಪತ್ರ ಚಳವಳಿ

ಮೈಸೂರು,ಮೇ.3:- ಬಿಪಿಎಲ್ ಕಾರ್ಡ್ ದಾರರಿಗೆ ಅನ್ನಭಾಗ್ಯದ ಅಕ್ಕಿಯನ್ನು ಹತ್ತು ಕೆಜಿ ಅಕ್ಕಿಯನ್ನು ಕಡಿತಗೊಳಿಸಿ ಎರಡು ಕೆಜಿ ಅಕ್ಕಿ ನೀಡುತ್ತಿರುವುದನ್ನು ವಿರೋಧಿಸಿ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪತ್ರ ಚಳವಳಿ ನಡೆಯಿತು.

ಮೈಸೂರು ಮಹಾನಗರ ಪಾಲಿಕೆಯ ಮುಂಭಾಗದ ಅಂಚೆ ಡಬ್ಬದ ಎದುರು ನಡೆದ ಚಳವಳಿಯಲ್ಲಿ ಪಾಲ್ಗೊಂಡ ಚಳವಳಿಗಾರರು ಮಾತನಾಡಿ ಬಡವರಿಗೆ ಅನುಕೂಲವಾಗಲೆಂದು ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಹತ್ತು ಕೆಜಿ ಅಕ್ಕಿಯನ್ನು ಬಿಪಿಎಲ್ ಪಡಿತರದಾರರಿಗೆ ನೀಡುತ್ತಿದ್ದರು. ಇದೀಗ ಲಾಕ್ ಡೌನ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಬಡವರಿಗೆ ನೀಡಲಾಗುತ್ತಿದ್ದ ಹತ್ತು ಕೆಜಿ ಅಕ್ಕಿಯನ್ನು ಕಡಿತಗೊಳಿಸಿ 2ಕೆಜಿಗೆ ಇಳಿಸಿದೆ. ಇದು ಬಡವರಿಗೆ ಮಾಡುತ್ತಿರುವ ದ್ರೋಹವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನಮ್ಮ ಹತ್ತು ಕೆಜಿ ಅಕ್ಕಿ ಕೊಡಿ ಸ್ವಾಮಿ, 2ಕೆಜಿ ಅಕ್ಕಿ ಆದರೆ ದಯಮಾಡಿ ಜಾಗ ಖಾಲಿ ಮಾಡಿ ಎಂದು ಪೋಸ್ಟ್ ಕಾರ್ಡ್ ಮೇಲೆ ಬರೆಯುವ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದರು.

ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್ ಮಾತನಾಡಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕಡಿತಗೊಳಿಸಿ 2ಕೆ.ಜಿ.ಕೊಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಹತ್ತು ಕೆಜಿ ನೀಡುವಂತೆ ಬರೆಯಬೇಕು. ಮೊದಲು ಬೇಳೆ, ಎಣ್ಣೆ, ಉಪ್ಪು ಕೊಡುತ್ತಿದ್ದರು. ಅದನ್ನೂ ಕೂಡ ಕೊಡಬೇಕು. ಅದನ್ನು ಯಾವುದೂ ಕೊಡುತ್ತಿಲ್ಲ.  ಅದೆಲ್ಲವನ್ನೂ ಕೊಡಬೇಕು ಎಂದು ಒತ್ತಾಯಿಸಿದರು.   ಪತ್ರ ಕಾರ್ಡ್ ಚಳವಳಿಯ ಮೂಲಕ ಬಿಜೆಪಿ ಸರ್ಕಾರ ಎಚ್ಚರಿಸುವ ಕೆಲಸ ನಡೆಯಬೇಕಾಗಿದೆ ಎಂದರು.   ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಇಂದು ಪತ್ರ ಚಳವಳಿ ನಡೆಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಮೈಸೂರು ನಗರಾಧ್ಯಕ್ಷ ಆರ್.ಮೂರ್ತಿ, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: