ದೇಶಪ್ರಮುಖ ಸುದ್ದಿಮನರಂಜನೆ

ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ನಟ ಅನಿರುದ್ಧ್ ಧಾವೆ

ಭೋಪಾಲ್‌,(ಮಧ್ಯಪ್ರದೇಶ),ಮೇ 3-ಕೊರೊನಾ ಸೋಂಕು ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಹಿಂದಿ ಕಿರುತೆರೆ ನಟ ಅನಿರುದ್ಧ್ ಧಾವೆ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಅನಿರುದ್ಧ್ ಧಾವೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಭೋಪಾಲ್‌ನಲ್ಲಿ ವೆಬ್ ಸೀರೀಸ್ ಶೂಟಿಂಗ್ ಮಾಡುತ್ತಿದ್ದಾಗ ಅನಿರುದ್ಧ್ ಧಾವೆಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಭೋಪಾಲ್‌ನಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅನಿರುದ್ಧ್ ಅವರ ಶ್ವಾಸಕೋಶವು ಶೇ.75 ರಷ್ಟು ಕೊರೊನಾ  ಸೋಂಕಿಗೆ ಒಳಗಾಗಿತ್ತು. ಆದರೆ ಈಗ ಅವರ ಸೋಂಕು ಮೊದಲಿನೊಂದಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಈ ಮೊದಲು ಅವರ ಸಿಟಿ ಸ್ಕೋರ್ 21/25 ಆಗಿದ್ದು, ಇದೀಗ 17/25 ಕ್ಕೆ ಸ್ವಲ್ಪ ಸುಧಾರಿಸಿದೆ. ಮುಂದಿನ 4-5 ದಿನಗಳವರೆಗೆ ಅನಿರುದ್ಧ್ ಅವರ ಸಿಟಿ ಸ್ಕೋರ್ ಇದೇ ರೀತಿಯಲ್ಲಿ ಕಡಿಮೆಯಾಗುತ್ತಿದ್ದರೆ, ಶೀಘ್ರದಲ್ಲೇ ಅವರು ಗುಣಮುಖರಾಗುತ್ತಾರೆ ಎಂದು ಅನಿರುದ್ಧ್ ಗ ಚಿಕಿತ್ಸೆ ನೀಡುವ ವೈದ್ಯರು  ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅನಿರುದ್ಧ್‌ ಗೆ ನಿರಂತರವಾಗಿ ಆಮ್ಲಜನಕ ನೀಡಲಾಗುತ್ತಿದೆ.

ಎರಡು ದಿನಗಳ ಹಿಂದೆ ಪತಿಯ ಆರೋಗ್ಯ ಸ್ಥಿತಿ ಗಂಭೀರವಾದ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಶುಭಿ ಅಹುಜಾ ಅವರು, ತನ್ನ 2 ತಿಂಗಳ ಮಗನನ್ನು ಮನೆಯಲ್ಲೇ ಬಿಟ್ಟು ಆಸ್ಪತ್ರೆಗೆ ತೆರಳಿದ್ದರು. ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದ ಅವರು, ಅನಿರುದ್ಧ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನ ನೋಡಿಕೊಳ್ಳಲು ಆಸ್ಪತ್ರೆಗೆ ತೆರಳುತ್ತಿದ್ದೇನೆ. ನನ್ನ ಎರಡು ತಿಂಗಳ ಮಗು ಅನಿಷ್ಕ್‌ನನ್ನು ಮನೆಯಲ್ಲೇ ಬಿಟ್ಟಿದ್ದೇನೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಸವಾಲಿನ ದಿನಗಳು. ಒಂದ್ಕಡೆ ಮಗುವಿನ ಜೊತೆ ನಾನಿರಬೇಕು. ಇನ್ನೊಂದ್ಕಡೆ ಅನಿರುದ್ಧ್ ಜೊತೆಗಿದ್ದು ಮಾನಸಿಕ ಸ್ಥೈರ್ಯ ತುಂಬಬೇಕು. ದಯವಿಟ್ಟು ನಮಗಾಗಿ ಪ್ರಾರ್ಥಿಸಿ. ಈ ಸಮಯದಲ್ಲಿ ನಿಮ್ಮೆಲ್ಲರ ಪ್ರಾರ್ಥನೆ ನಮಗೆ ತುಂಬಾ ಅವಶ್ಯಕ. ನಿಮ್ಮೆಲ್ಲರ ಪ್ರಾರ್ಥನೆಯಿಂದ ಅನಿರುದ್ಧ್ ಗುಣಮುಖರಾಗಲಿದ್ದಾರೆ ಎಂದಿದ್ದರು. ಜೊತೆಗೆ ಮಗು ಜೊತೆಯಿರುವ ಅನಿರುದ್ಧ್ ಧಾವೆರವರ ಫೋಟೋವನ್ನೂ ಹಂಚಿಕೊಂಡಿದ್ದರು. ಅನಿರುದ್ಧ್ ಧಾವೆ ಬೇಗ ಗುಣಮುಖರಾಗಲಿ ಎಂದು ಕಿರುತೆರೆ ಲೋಕದ ನಟ-ನಟಿಯರು ಹಾಗೂ ಅಭಿಮಾನಿಗಳು ಹಾರೈಸಿದ್ದರು.

‘ಪಟಿಯಾಲಾ ಬೇಬ್ಸ್’, ‘ಲಾಕ್‌ಡೌನ್‌ ಕಿ ಲವ್ ಸ್ಟೋರಿ’ ಮುಂತಾದ ಟಿವಿ ಶೋಗಳಿಂದ ಅನಿರುದ್ಧ್ ಧಾವೆ ಜನಪ್ರಿಯತೆ ಗಳಿಸಿದ್ದಾರೆ. ‘ತೇರೇ ಸಂಗ್’ ಚಿತ್ರದಲ್ಲಿ ಅಭಿನಯಿಸಿರುವ ಅನಿರುದ್ಧ್ ಧಾವೆ, ಅಕ್ಷಯ್ ಕುಮಾರ್‌ರವರ ‘ಬೆಲ್ ಬಾಟಂ’ ಸಿನಿಮಾದಲ್ಲೂ ನಟಿಸಿದ್ದಾರೆ.  (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: