ಕರ್ನಾಟಕಪ್ರಮುಖ ಸುದ್ದಿ

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವು: ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಸಿಎಂ ಬಿಎಸ್ವೈ

ಚಾಮರಾಜನಗರ,ಮೇ 3-ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗೆ ಕರೆ ಮಾಡಿದ ಬಿಎಸ್ವೈ ಅವರು, ದುರಂತದ ಕುರಿತು ವಿವರಗಳನ್ನು ಪಡೆದುಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ನಿನ್ನೆ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಖಾಲಿಯಾದ ಪರಿಣಾಮ 24 ಮಂದಿ ಮೃತಪಟ್ಟಿದ್ದಾರೆ. ರಾತ್ರಿ 9 ಗಂಟೆಗೆ ಮೈಸೂರಿನಿಂದ ಸಿಲಿಂಡರ್‌ಗಳು ಬರಬೇಕಿತ್ತು. ಆದರೆ ಮೈಸೂರಿಂದ ಹೊರ ಜಿಲ್ಲೆಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಹಾಗಾಗಿ ಸಿಲಿಂಡರ್ ಬಂದಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದು ಹೇಳಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೈಸೂರು ಜಿಲ್ಲಾಡಳಿತ ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ ಮಾಡಿಲ್ಲ ಎಂದಿದೆ. ನಿನ್ನೆ ರಾತ್ರಿ 12.30 ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು‌ 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿ ಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಅದನ್ನು ಸರಿಯಾದ ಸಮಯದಲ್ಲಿ ಬಂದಿದ್ದೇಯಾ ಇಲ್ಲವೋ ಗೊತ್ತಿಲ್ಲ. ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ವಿಳಂಬ ಮಾಡಿಲ್ಲ. ನಾವು ಅಧಿಕೃತ ವಾಗಿ 250 ಆಕ್ಸಿಜನ್ ಸಿಲಿಂಡರ್ ನಿನ್ನೆ ಮಧ್ಯರಾತ್ರಿಯ ವೇಳೆಗೆ ಕಳಿಸಿರೋದು ದಾಖಲೆಯಲ್ಲಿದೆ. ಮೈಸೂರಿನ ಸೌತ್ರನ್ ಗ್ಯಾಸ್ ನಿಂದ 210 ಹಾಗೂ ಮೈಸೂರು ಜಿಲ್ಲಾ ಆಸ್ಪತ್ರೆಯಿಂದ 40 ಆಕ್ಸಿಜನ್ ಗ್ಯಾಸ್ ಸಿಲಿಂಡರ್ ಚಾಮರಾಜ ನಗರಕ್ಕೆ ನಿನ್ನೆ ಮಧ್ಯರಾತ್ರಿಯೇ ರವಾನೆಯಾಗಿದೆ ಎಂದು ಹೇಳಿದೆ. (ಎಂ.ಎನ್)

Leave a Reply

comments

Related Articles

error: