ಮೈಸೂರು

ಮನೆ ಪಕ್ಕದ ಜಾಗ ಒತ್ತುವರಿ : ಕ್ರಮಕ್ಕೆ ಒತ್ತಾಯ

ಜಯಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಜಯಪುರ ಗ್ರಾಮದ ಜಂಜರ್ ನಂ. 2/2ರ ಮನೆಯ ಪಕ್ಕದ ಖಾಲಿ ಬಿಟ್ಟಿದ ಜಾಗವನ್ನು ಪಕ್ಕದ ನಿವಾಸಿ ಲೇಟ್ ಮಲ್ಲಪ್ಪನವರ ಮಗ ವೆಂಕಟರಮಣ ಅಲಿಯಾಸ್ ಕಾಂತಿ ಎಂಬುವವರು ಹೊಸದಾಗಿ ಗೇಟ್ ಮತ್ತು ಶೆಡ್ ನಿರ್ಮಿಸುವ ಮೂಲಕ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮದ ನಿವಾಸಿ ಮಂಗಳಗೌರಿ ಆರೋಪಿಸಿದ್ದಾರೆ.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಪುರದ ಗ್ರಾಮದ ಜಂಜರ್ ನಂ 2/2ರಲ್ಲಿ ವಾಸವಿರುವ ನಾನು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆಗಾಗಿ ಒಂದು ವಾರ ಕಾಲ ಮೈಸೂರಿನ ನನ್ನ ತಂಗಿಯ ಮನೆಯಲ್ಲಿದ್ದೆ. ಆ ಸಮಯವನ್ನು ದುರುಪಯೋಗಪಡಿಸಿಕೊಂಡ ವೆಂಕಟರಮಣ ಅಲಿಯಾಸ್ ಕಾಂತಿ ಎಂಬುವವರು ಸಾರ್ವಜನಿಕರು ತಿರುಗಾಡಲು ಬಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡು ತಮ್ಮ ಮನೆಯ ಗೋಡೆಯ ಕಿಟಿಕಿಗಳು ಸೇರಿದಂತೆ ನಮ್ಮ ಗೋಡೆಗೆ ಅರ್ಧದಷ್ಟು ರಂಧ್ರ ಕೊರೆದು ಪೈಪ್ ಅಳವಡಿಸಿ ಎ.ಸಿ.ಶೀಟ್ ಮೇಲ್ಛಾವಣಿ ನಿರ್ಮಾಣ ಮಾಡಿಕೊಂಡಿರುತ್ತಾರೆ, ಇದರಿಂದಾಗಿ ಮಳೆ ಬಂದಾಗ ನನ್ನ ಮನೆಯೆಲ್ಲ ಸಂಪೂರ್ಣವಾಗಿ ಜಲಮಯವಾಗುವುದು ಎಂದು ತಮ್ಮ ಅಳಲನ್ನು ತೊಡಿಕೊಂಡರು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದರು.

ಈ ಬಗ್ಗೆ ಜಯಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದ್ದು, ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿರುತ್ತಾರೆ. ಆದರೂ ಪಂಚಾಯತ್ ನಿಂದ ಬಂದಿರುವ ಆದೇಶಕ್ಕೆ ವಿರುದ್ಧವಾಗಿ ವೆಂಕಟರಮಣ ನಡೆದುಕೊಂಡಿರುತ್ತಾರೆ. ಇದನ್ನೇ ದ್ವೇಷವಾಗಿ ಪರಿಗಣಿಸಿರುವ ವೆಂಕಟರಮಣ ಕಂಡ ಕಂಡಾಗಲೆಲ್ಲಾ ಅವಾಚ್ಯ ಶಬ್ಧಗಳಿಂದ ನಿಂದಿಸಿ,  ರಾತ್ರಿ ವೇಳೆ ಕಿಟಿಕಿ ಮೂಲಕ ಪೆಟ್ರೋಲ್ ಎರಚಿ ಬೆಂಕಿ ಕಡ್ಡಿ ಕೀರಿ ನಿನ್ನನ್ನು ಸಾಯಿಸಿಬಿಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ಇವರು ಹಣಕಾಸಿನ ಪ್ರಭಾವದಿಂದ ನಾನು ಏನಾದರೂ ಮಾಡಬಲ್ಲೆ ಎಂಬ ದುರಹಂಕಾರದಿಂದ ಮಾನಸಿಕವಾಗಿ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ಠಾಣಾ ಅಧಿಕಾರಿಗಳು ಎಫ್‌ಐಆರ್ ದಾಖಲಿಸದೇ ಎನ್‌ಸಿಆರ್ ನೀಡಿ ಸುಮ್ಮನಾಗಿಬಿಟ್ಟಿದ್ದಾರೆ. ಆದ್ದರಿಂದ  ಸಂಬಂಧಪಟ್ಟವರು ಕೂಡಲೇ ವೆಂಕಟರಮಣರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೌಂಡೇಷನ್ ಜಿಲ್ಲಾ ಅಧ್ಯಕ್ಷೆ ಮಂಗಳಗೌರಿ, ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಎಸ್.ವಿಜಯಲಕ್ಷ್ಮಿ ಹಾಗೂ ಕಾರ್ಯಕರ್ತ ಜವರಪ್ಪ ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: