ಮೈಸೂರು

ವ್ಯಕ್ತಿಯ ಭಾವನೆ ಮತ್ತು ಯೋಚನೆಗಳು ಹೋಮಿಯೋಪತಿಯಲ್ಲಿ ಮುಖ್ಯ : ಡಾ. ಎಂ.ಸಿ. ಮನೋಹರ್

ಮೈಸೂರು,ಮೇ.4:- ವ್ಯಕ್ತಿಯ ಭಾವನೆ ಮತ್ತು ಯೋಚನೆಗಳು ಹೋಮಿಯೋಪತಿಯಲ್ಲಿ ಮುಖ್ಯ ಎಂದು ಖ್ಯಾತ ಹೋಮಿಯೋಪತಿ ವೈದ್ಯರಾದ ಡಾ. ಎಂ.ಸಿ. ಮನೋಹರ್‍ ಅವರು ಹೇಳಿದರು.

ನಿನ್ನೆ ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ     ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-22’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ  ‘ಯೋಚನೆ, ಭಾವನೆ ಮತ್ತು ಹೋಮಿಯೋಪತಿ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಯಾವ ವಸ್ತು ಆರೋಗ್ಯವಂತ ಮನುಷ್ಯನು ಸೇವಿಸಿದಾಗ ಅವನಲ್ಲಿ ರೋಗದ ಚಿಹ್ನೆಗಳನ್ನು ಉಂಟು ಮಾಡುವ ಶಕ್ತಿಯನ್ನು ಹೊಂದಿದೆಯೋ, ಅದೇ ವಸ್ತುವನ್ನು ವಿಶೇಷ ರೀತಿಯಲ್ಲಿ ಸಂಸ್ಕರಿಸಿ ಅತ್ಯಲ್ಪ ಪ್ರಮಾಣದಲ್ಲಿ ಅದೇ ರೀತಿಯ ಚಿಹ್ನೆಗಳಿಂದ ಬಳಲುತ್ತಿರುವ ರೋಗಿಗೆ ನೀಡಿದಾಗ ಆತ ಗುಣಮುಖನಾಗುತ್ತಾನೆ. ಇದು ಹೋಮಿಯೋಪತಿ ಮೂಲ ಸಿದ್ಧಾಂತ. ಪ್ರಕೃತಿಯಲ್ಲಿ ಸಿಗುವ ಸಸ್ಯಗಳು ಮತ್ತು ಖನಿಜಗಳಿಂದ ಹೋಮಿಯೋಪತಿ ಔಷಧಿಯನ್ನು ಸಿದ್ಧಪಡಿಸಲಾಗುತ್ತದೆ. ಜರ್ಮನಿಯ ಡಾ. ಹಾನಿಮನ್ ಮತ್ತು ಅವರ ನಂತರ ಬಂದ ಅನೇಕ ವಿಜ್ಞಾನಿಗಳು ಸಂಶೋಧನೆ ಮಾಡಿ ಈ ಹೋಮಿಯೋಪತಿ ವೈದ್ಯ ಪದ್ಧತಿಯನ್ನು ಕಂಡುಹಿಡಿದರು. ಕಾಯಿಲೆಯಲ್ಲಿ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಕಾಯಿಲೆ ಎಂದು ಎರಡು ವಿಧಗಳು. ಅಲ್ಪಕಾಲೀನ ಕಾಯಿಲೆಗಳಲ್ಲಿ ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ದೀರ್ಘಕಾಲೀನ ಕಾಯಿಲೆಗಳು ಬರುವುದು ನಿಧಾನ, ವಾಸಿಯಾಗುವುದು ನಿಧಾನ. ಕೆಲವೊಂದು ಜೀವನ ಪರ್ಯಂತ ಇರುತ್ತವೆ. ಊಟದಲ್ಲಿನ ವ್ಯತ್ಯಾಸ, ಪರಿಸರದಲ್ಲಿನ ಬದಲಾವಣೆಯಿಂದ ಮನುಷ್ಯ ಅನಾರೋಗ್ಯಕ್ಕೀಡಾಗುತ್ತಾನೆ.  ಭಾವನೆಗಳು ಬದಲಾವಣೆಯಾಗಿ ದೇಹದಲ್ಲಿನ ಹಾರ್ಮೋನ್‍ ಗಳ ಏರುಪೇರಿನಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು. ಪ್ರತಿಯೊಬ್ಬರು ಅನಾರೋಗ್ಯಕ್ಕೀಡಾದಾಗ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಹಾಗಾಗಿ ರೋಗಿಯ ಭಿನ್ನತೆ, ವಿಶಿಷ್ಟತೆ ಮತ್ತು ದೈಹಿಕ ಕ್ಷಮತೆಯನ್ನು ಆಧರಿಸಿ ಔಷಧಿ ನೀಡಲಾಗುತ್ತದೆ ಹಾಗೂ ಅದರಲ್ಲಿ ಯಶಸ್ಸನ್ನು ಕಾಣಲಾಗಿದೆ. ದೀರ್ಘಕಾಲೀನ ಕಾಯಿಲೆಗಳಲ್ಲಿ ವ್ಯಕ್ತಿಯ ಯೋಚನೆಗಳಿಗೆ ಮಹತ್ವವನ್ನು ನೀಡಲಾಗುತ್ತದೆ. ಇಲ್ಲಿ ವ್ಯಕ್ತಿಯ ಜೀವನ ವೃತ್ತಾಂತವನ್ನು ತಿಳಿದುಕೊಳ್ಳಲಾಗುತ್ತದೆ. ಒಂದು ಸನ್ನಿವೇಶಕ್ಕೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಮಾನಸಿಕ ಸ್ಥಿತಿ ಮತ್ತು ಗೊಂದಲಗಳಿಂದಲೇ ಅನೇಕ ಕಾಯಿಲೆಗಳು ಬರುತ್ತವೆ. ಜೀವನದಲ್ಲಿ ಘಟಿಸುವ ಅನೀರಿಕ್ಷಿತ ಘಟನೆಗಳು, ಒತ್ತಡದ ಜೀವನ, ಮಹತ್ವಾಕಾಂಕ್ಷೆ, ಆತಂಕ, ಬೇಸರ, ಕೊರಗು, ಅವಮಾನದ ಭಾವನೆಗಳಿಂದಲೇ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಥೈರಾಯ್ಡ್, ಮೊಳೆರೋಗದಂತಹ ರೋಗಗಳು ಮನುಷ್ಯನನ್ನು ಆವರಿಸುತ್ತಿವೆ. ಇದಕ್ಕೆ ಹೋಮಿಯೋಪತಿಯಲ್ಲಿ ಸಾಕಷ್ಟು ಪರಿಹಾರಗಳಿವೆ ಎಂದು ತಿಳಿಸಿದರು.

ಆನ್‍ ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಕೆ.ಜಿ. ವಿನುತಾ ಪ್ರಾರ್ಥಿಸಿದರು.  ಮಹೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿ ಸೋಮವಾರವೂ ನಡೆಯುವ ಈ ಉಪನ್ಯಾಸದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ, ಯೋಗ, ಆರೋಗ್ಯ, ಜೀವನಶೈಲಿ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಆನ್‍ಲೈನ್ ಮೂಲಕ ನಡೆಯುವ ಈ ಉಪನ್ಯಾಸ ಕಾರ್ಯಕ್ರಮವು ಸಾಕಷ್ಟು ಜನಪ್ರಿಯಗೊಂಡಿದೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: