ದೇಶಪ್ರಮುಖ ಸುದ್ದಿ

ಹೈದರಾಬಾದ್ ಮೃಗಾಲಯದ ಎಂಟು ಏಷ್ಯಾಟಿಕ್ ಸಿಂಹಗಳಿಗೆ ಕೋವಿಡ್-19 ಪಾಸಿಟಿವ್ ದೃಢ

ದೇಶ( ಹೈದರಾಬಾದ್)ಮೇ.4:- ಇದೇ ಮೊದಲ ಬಾರಿಗೆ ಹೈದರಾಬಾದ್ ಮೃಗಾಲಯದ ಎಂಟು ಏಷ್ಯಾಟಿಕ್ ಸಿಂಹಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ(ಸಿಸಿಎಂಬಿ) ನಡೆಸಿದ ಪರೀಕ್ಷೆಯಲ್ಲಿ ಎಂಟು ಸಿಂಹಗಳು, ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸಿಂಹಳಿಗೆ ಹಳೆ ಮಾದರಿಯ ಕೋವಿಡ್ -19 ಸೋಂಕು ತಗುಲಿದೆ. ಸಿಂಹಗಳಿಗೆ ಕೊರೋನಾ ಪಾಸಿಟಿವ್ ಬಂದ ಮೊದಲ ಪ್ರಕರಣ ಇದಾಗಿದೆ.

ಎಂಟು ಸಿಂಹಗಳಲ್ಲಿ ಒಣ ಕೆಮ್ಮು, ಮೂಗು ಸೋರುವಿಕೆ ಮತ್ತು ಹಸಿವಿನ ಕೊರತೆ ಸೇರಿದಂತೆ ಸೌಮ್ಯ ರೋಗಲಕ್ಷಣಗಳನ್ನು ಮೃಗಾಲಯದ ಪಶುವೈದ್ಯರು ಗಮನಿಸಿದ ಕೆಲವು ದಿನಗಳ ನಂತರ ಸಿಂಹಗಳ ಒರೊಫಾರ್ಂಜಿಯಲ್ ಸ್ವ್ಯಾಬ್ ಮಾದರಿ ಸಂಗ್ರಹಿಸಿ ಸಿಸಿಎಂಬಿಗೆ ಕಳುಹಿಸಲಾಗಿತ್ತು.

“ಸಿಂಹಗಳಲ್ಲಿ ಕೋವಿಡ್ ಸೌಮ್ಯ ರೋಗಲಕ್ಷಣಗಳು ಕಂಡುಬಂದ ಬಗ್ಗೆ ನಮಗೆ ಒಂದು ವಾರದ ಹಿಂದೆ ತಿಳಿಸಲಾಯಿತು. ನಾವು ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ ನಂತರ, ಅವುಗಳಲ್ಲಿ ಎಂಟು ಸಿಂಹಗಳಿಗೆ ಪಾಸಿಟಿವ್ ಬಂದಿದೆ ಎಂದು ಸಿಸಿಎಂಬಿಯ ನಿರ್ದೇಶಕ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ಮನುಷ್ಯರಿಂದ ಬಂದಿದೆಯೆ ಎಂದು ಕಂಡುಹಿಡಿಯಲು ಜೀನೋಮ್ ಸೀಕ್ವೆನ್ಸಿಂಗ್ ಮಾಡಿದ್ದೇವೆ. ವೈರಸ್ ಮೊದಲು ಪ್ರಾಣಿಗಳ ಪಾಲನೆದಾರರಿಗೆ ತಗುಲಿರಬಹುದು ಮತ್ತು ನಂತರ ಅದು ಸಿಂಹಗಳಿಗೆ ಹರಡಬಹುದು ಎಂದು ವರದಿ ಸೂಚಿಸುತ್ತದೆ. ಪ್ರಾಣಿಗಳನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಇತರ ಪ್ರಾಣಿಗಳು ವೈರಸ್ ತಗುಲದಂತೆ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ನಾವು ಮೃಗಾಲಯದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: