ಕರ್ನಾಟಕಪ್ರಮುಖ ಸುದ್ದಿ

ಆಕ್ಸಿಜನ್ ಕೊರತೆಯಿಂದ ಇನ್ನು ಎಷ್ಟು ಜನ ಸಾಯಬೇಕು?: ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಕಿಡಿ

ಬೆಂಗಳೂರು,ಮೇ 5-ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಇನ್ನೂ ಎಷ್ಟು ಜನ ಸಾಯಬೇಕು? ನಿಮಗೆ ಜನ ಸಾಯುವುದು ಬೇಕೆ? ಎಂದು ಕರ್ನಾಟಕ ಹೈ ಕೋರ್ಟ್ ನಿನ್ನೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಸೋಂಕು ಕಡಿಮೆ ಇರುವ ರಾಜ್ಯಗಳಿಗೆ ಹೆಚ್ಚು ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಎಷ್ಟೊಂದು ಪಾಸಿಟಿವ್‌ ಕೇಸ್‌ಗಳಿದ್ದರೂ ಏಕೆ ತಾರತಮ್ಯ ಎಂದು ತರಾಟೆಗೆ ಕೋರ್ಟ್‌ ತೆಗೆದುಕೊಂಡ ನ್ಯಾಯಾಲಯ, ನಿಮ್ಮ ವಿವರಣೆ ಬೇಕಿಲ್ಲ. ಕೂಡಲೇ ರಾಜ್ಯದ ಆಕ್ಸಿಜನ್ ಪಾಲು ಹೆಚ್ಚಳ ಮಾಡಿ. ಇಲ್ಲವಾದರೆ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಪಿಐಎಲ್‌ ವಿಚಾರಣೆ ನಡೆಸಿದ ಮುಖ್ಯ  ನ್ಯಾ. ಎ.ಎಸ್‌. ಓಕ್‌ ಹಾಗೂ ಹಿರಿಯ ನ್ಯಾ. ಅರವಿಂದ್‌ ಕುಮಾರ್‌ ಅವರಿದ್ದ ಪೀಠವು ಕೇಂದ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ರಾಜ್ಯದಲ್ಲಿ ಎಷ್ಟು ಆಕ್ಸಿಜನ್‌ ಬೇಡಿಕೆ ಇದೆ, ಎಷ್ಟು ಕೊರತೆ ಇದೆ ಹಾಗೂ ಕೇಂದ್ರದಿಂದ ಪೂರೈಕೆಯಾಗುತ್ತಿರುವ ಪ್ರಮಾಣವೆಷ್ಟು ಎಂದು ಕೇಂದ್ರ, ರಾಜ್ಯದ ಪರ ವಕೀಲರನ್ನು ಪ್ರಶ್ನಿಸಿತು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮೇ 5ರ ಅಂದಾಜಿನಂತೆ ರಾಜ್ಯಕ್ಕೆ 1700 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅಗತ್ಯವಿದೆ. ಸರ್ಕಾರವೇ ಆಸ್ಪತ್ರೆಗಳ ಬೇಡಿಕೆ ಆಧರಿಸಿ ಆಕ್ಸಿಜನ್‌ ಪೂರೈಕೆ ಮಾಡುತ್ತಿದೆ ಎಂದರು. ಕೇಂದ್ರದ ಪರ ವಾದಿಸಿದ ವಕೀಲ ಎಂ.ಎನ್‌. ಕುಮಾರ್‌ ಹಿಂದಿನ ವಿಚಾರಣೆ ವೇಳೆ ರಾಜ್ಯಕ್ಕೆ ಹೆಚ್ಚುವರಿ ಆಕ್ಸಿಜನ್‌ ಪೂರೈಕೆಗೆ ಕೇಂದ್ರಕ್ಕೆ ಸೂಚಿಸಲಾಗಿತ್ತು, ಅದರಂತೆ ಹಂಚಿಕೆ ಪ್ರಮಾಣವನ್ನು 802 ಮೆಟ್ರಿಕ್‌ ಟನ್‌ನಿಂದ 865 ಮೆಟ್ರಿಕ್‌ ಟನ್‌ಗೆ ಹೆಚ್ಚಿಸಲಾಗಿದೆ ಎಂದರು.

ಆಗ ನ್ಯಾಯಪೀಠ ”ರಾಜ್ಯದಲ್ಲಿ ಆಕ್ಸಿಜನ್‌ ಬೇಡಿಕೆ 1700 ಮೆ.ಟನ್‌ಗೆ ಏರಿಕೆಯಾಗಿದೆ. ಅದನ್ನು ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಸೋಂಕಿತರು ಆಕ್ಸಿಜನ್‌ ಸಿಗದೆ ಸಾಯುತ್ತಿದ್ದಾರೆ. ಈ ಸಂಬಂಧ ಕೇಂದ್ರದಿಂದ ಸ್ಪಷ್ಟನೆ ಪಡೆದು ಮಾಹಿತಿ ನೀಡಬೇಕು,” ಎಂದು ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು.

ಮಧ್ಯಾಹ್ನ ನಂತರ ವಿಚಾರಣೆ ಆರಂಭವಾದಾಗ ಕೇಂದ್ರ ಸರಕಾರಿ ವಕೀಲರು ರಾಜ್ಯಕ್ಕೆ ಹೆಚ್ಚಿನ ಆಕ್ಸಿಜನ್‌ ಪೂರೈಸುವ ಸಂಬಂಧ ನಿರ್ಧಾರ ಕೈಗೊಳ್ಳಲು ಸಮಯಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ ಚಾಮರಾಜನಗರ, ಕಲಬುರಗಿಯಲ್ಲಿ ಆಕ್ಸಿಜನ್‌ ಸಿಗದೆ ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್‌ ಸಿಗದೆ ಮತ್ತೆಷ್ಟು ಕೋವಿಡ್‌ ರೋಗಿಗಳು ಸಾವನ್ನಪ್ಪಬೇಕು ಎಂದು ಪ್ರಶ್ನಿಸಿತು.

ರಾಜ್ಯದಲ್ಲಿ ಕೋವಿಡ್‌ ಸೋಂಕು ಮಿತಿ ಮೀರುತ್ತಿದೆ. ಬೆಂಗಳೂರು ಬಿಟ್ಟು ಉಳಿದೆಲ್ಲೆಡೆ ದಿನಕ್ಕೆ 20 ಸಾವಿರಕ್ಕೂ ಅಧಿಕ ಪ್ರಕರಣಗಳಿಲ್ಲ. ಬೇರೆ ರಾಜ್ಯಗಳಿಗೆ ಪೂರೈಕೆಯಾಗುತ್ತಿರುವ ಆಕ್ಸಿಜನ್‌ ಅನ್ನು ರಾಜ್ಯಕ್ಕೆ ಪೂರೈಸಬಹುದಲ್ಲವೆ ಎಂದು ಕೇಳಿತು. ಕೇಂದ್ರದ ವಕೀಲರು ಆಕ್ಸಿಜನ್‌ ಪೂರೈಕೆ ವಿಚಾರ ಒಂದೇ ಇಲಾಖೆ ನಿರ್ಧರಿಸುಧಿವುದಿಲ್ಲ. ಸಂಬಂಧಪಟ್ಟ ಇಲಾಖೆಗಳು ಹಾಗೂ ಪ್ರಾಧಿಕಾರಗಳು ಸಭೆ ನಡೆಸಿ ತೀರ್ಮಾನಿಸಬೇಕು. ಹಾಗಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆಕ್ಸಿಜನ್ ಪೂರೈಕೆಗೆ ಕೇಂದ್ರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು. (ಎಂ.ಎನ್)

Leave a Reply

comments

Related Articles

error: