ಪ್ರಮುಖ ಸುದ್ದಿಮೈಸೂರು

‘ಕೈ’ ಕೊಟ್ಟು ‘ತೆನೆ’ಹೊರಲಿರುವ ಅಡಗೂರು ಹೆಚ್.ವಿಶ್ವನಾಥ್?

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ವಿಜಯದ ನಗು ಬೀರಿರುವ ರಾಜ್ಯ ಕೈ ನಾಯಕರಿಗೆ ಕುರುಬ ಜನಾಂಗದ ಪ್ರಭಾವಿ ನಾಯಕ ಹಾಗೂ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್   ಶಾಕ್ ನೀಡಲು ನಿರ್ಧರಿಸಿದ್ದಾರೆ!   ಸದ್ದಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ‘ಕೈ’ ಕೊಟ್ಟು ಜೆಡಿಎಸ್ ಸೇರಲು ತೀರ್ಮಾನಿಸಿದ್ದಾರೆ.  ಹೀಗಂತ ಅವರ ಆಪ್ತ ವಲಯ ತಿಳಿಸಿದೆ.  ಈಗಾಗಲೇ ಹಿರಿಯ ನಾಯಕ ಎಸ್.ಎಂ.ಕೃಷ್ಣ ಮತ್ತು ವಿ.ಶ್ರೀನಿವಾಸ್ ಪ್ರಸಾದ್ ಅವರ ನಿರ್ಗಮನದಿಂದ ರಾಜ್ಯದಲ್ಲಿ ಕಾಂಗ್ರೆಸ್‍ ಬಡವಾಗಿದೆ. ಇನ್ನು ವಿಶ್ವನಾಥ್ ನಿರ್ಗಮನ  ಕರ್ನಾಟಕದಲ್ಲಿ ಕಾಂಗ್ರೆಸ್ ಅವಸಾನದಂಚಿಗೆ ಇಳಿಯುತ್ತಿರುವಂತೆ ಕಾಣಿಸುತ್ತಿದೆ. ಹಳೇ ಮೈಸೂರು ಪ್ರಾಂತ್ಯದ ಜನಪ್ರಿಯ ನಾಯಕ ವಿಶ್ವನಾಥ್ ಅವರು ಕೂಡ ಪಕ್ಷ ತೊರೆಯುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ತಮ್ಮದೇ ಆಧಿಪತ್ಯ ಸ್ಥಾಪಿಸಲು ಹೊರಟಿರುವ ಕಾಂಗ್ರೆಸ್ ಮುಖಂಡರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜೆಡಿಎಸ್ ಸೇರುವ ವದಂತಿ ದಟ್ಟವಾಗುತ್ತಿದೆಯಾದರೂ ನಾನು ಜೆಡಿಎಸ್ ವರಿಷ್ಠರನ್ನು ಇನ್ನೂ ಭೇಟಿಯಾಗಿಲ್ಲ. ನನ್ನ ಮೇಲಿನ ಅಭಿಮಾನದಿಂದ ಸಂಸದ ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್ ಹಾಗೆ ಹೇಳುತ್ತಿದ್ದಾರೆ ಎಂದಿದ್ದಾರೆ.

ಪಕ್ಷದಲ್ಲಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಏ.19ರಂದು ಹೈಕಮಾಂಡ್ ನನ್ನ ಭೇಟಿಗೆ ಸಮಯ ನಿಗದಿ ಮಾಡಿತ್ತು. ಅದೇ ದಿನ ಸಿದ್ದರಾಮಯ್ಯನವರನ್ನೂ ಕರೆಸಿತ್ತು. ಎರಡೂ ಕ್ಷೇತ್ರಗಳ ಉಪಚುನಾವಣೆಯ ಗೆಲುವಿನಿಂದ ನಮ್ಮ ಮಾತು ಕಿವಿಗೆ ಹೋಗಲಾರದೆಂದು ತೆರಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ತನೆ ಇಷ್ಟವಾಗುತ್ತಿಲ್ಲ. ಅವರು ಹೈಕಮಾಂಡ್ ಗೇ ಹೈಕಮಾಂಡ್ ಆಗಿದ್ದಾರೆ. ಉಪ ಚುನಾವಣಾ ಪ್ರಚಾರಕ್ಕೂ ನನ್ನ ಕರೆದಿರಲಿಲ್ಲ. ಕಡೆಗಣಿಸಲಾಗಿತ್ತು. ಆದರೂ ನಾನೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಜನರ ಜತೆ ಬೆಳೆದ ನಮ್ಮಂಥಹವರಿಗೆ ಕನಿಷ್ಠ ಗೌರವ ನೀಡಿ, ಪಕ್ಷದ ನಿಷ್ಠಾವಂತರನ್ನು ಕಳೆದುಕೊಂಡರೆ ಅದು ಪಕ್ಷಕ್ಕೆ ಆಗುವ ನಷ್ಟ ಎಂಬುದನ್ನು ಅವರು ಅರಿತುಕೊಳ್ಳಬೇಕು. ಆದರೆ ಅವರು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ.

ಇದೀಗ ವಿಶ್ವನಾಥ ಜೆಡಿಎಸ್ ಸೇರಿದರೆ ಅವರಿಗೆ ಆನೆಬಲ ಬಂದಂತಾಗುತ್ತದೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರ ಸಮ್ಮುಖ ಮೇ.10ರಂದು ಜೆಡಿಎಸ್ ಸೇರಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ನ ಹಿರಿಯನಾಯಕರು ಒಬ್ಬೊಬ್ಬರೇ ಕಾಂಗ್ರೆಸ್ ಗೆ ಕೈ ಕೊಡುತ್ತಿರುವುದು ಕರ್ನಾಟಕ ಕಾಂಗ್ರೆಸ್ ಮುಕ್ತ ರಾಜ್ಯವಾಗುವ ಮುನ್ಸೂಚನೆಯೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. (ಸಿಟಿಬ್ಯೂರೋ)

Leave a Reply

comments

Related Articles

error: