ಕರ್ನಾಟಕದೇಶಪ್ರಮುಖ ಸುದ್ದಿ

ಆಕ್ಸಿಜನ್ ಪೂರೈಕೆ ವಿಚಾರ: ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್; ಕೇಂದ್ರಕ್ಕೆ ಮುಖಭಂಗ

ನವದೆಹಲಿ/ಬೆಂಗಳೂರು,ಮೇ 7-ಕರ್ನಾಟಕ ರಾಜ್ಯಕ್ಕೆ 1,200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿ ಹಿಡಿದಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಕರ್ನಾಟಕ ಕೇಳಿರುವಷ್ಟು ಆಕ್ಸಿಜನ್‌ ಪೂರೈಕೆ ಮಾಡುವುದು ಕಷ್ಟ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ರಾಜ್ಯ ಹೈಕೋರ್ಟ್‌ ಸರ್ಕಾರ ಕೇಳಿದಷ್ಟು ಆಕ್ಸಿಜನ್‌ ಪೂರೈಸಲು ಆದೇಶಿಸಿತ್ತು. ಈ ವಿವಾದ ಸುಪ್ರೀಂಕೋರ್ಟ್‌ಗೆ ಹೋಗಿತ್ತು. ಸುಪ್ರೀಂ ಕೋರ್ಟ್ ಕೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಕರ್ನಾಟಕ ಹೈಕೋರ್ಟ್ ಆದೇಶವು ಸರಿಯಾಗಿದೆ, ನ್ಯಾಯಯುತವಾಗಿದೆ. ಈ ಕಾರಣದಿಂದ ಕೇಂದ್ರ ಸರ್ಕಾರದ ಮನವಿಯನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಾನು ತಡೆ ನೀಡುವುದಿಲ್ಲ. ಹೈಕೋರ್ಟ್ ಆದೇಶದ ಮಧ್ಯೆ ನಾನು ಪ್ರವೇಶಿಸುವುದಿಲ್ಲ. ಅದು ನೀಡಿರುವ ಆದೇಶ ತಪ್ಪಲ್ಲ ಎಂದಿದ್ದು, 4 ದಿನಗಳಲ್ಲಿ ರಾಜ್ಯದ ಮನವಿ ಪರಿಗಣಿಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ಕರ್ನಾಟಕದ ಜನರನ್ನು ಕಷ್ಟಕ್ಕೆ ದೂಡಲು ಸಾಧ್ಯವಿಲ್ಲ. ಮನವಿ ಪರಿಗಣಿಸುವವರೆಗೆ ತಕ್ಷಣ ಜಾರಿ ಬರುವಂತೆ ದಿನಕ್ಕೆ 1200 ಮೆ.ಟನ್.ಗೆ ಹೆಚ್ಚಿಸಲು ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯದಲ್ಲಿ ಆಮ್ಲಜನಕದ ಹಂಚಿಕೆಯನ್ನು 965 ಮೆಟ್ರಿಕ್ ಟನ್ ನಿಂದ 1200 ಮೆಟ್ರಿಕ್ ಟನ್ ಗೆ ಹೆಚ್ಚಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಬುಧವಾರ ಕೇಂದ್ರಕ್ಕೆ ಹೇಳಿತ್ತು. ಇದರ ವಿರುದ್ಧ ಕೇಂದ್ರವು ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: