ಕರ್ನಾಟಕಪ್ರಮುಖ ಸುದ್ದಿ

ಮಂಡ್ಯ ಜಿಲ್ಲೆಗೆ 100 ಆಕ್ಸಿಜನ್ ಸಿಲಿಂಡರ್, 10 ಸಾವಿರ ಓ-19 ಮಾಸ್ಕ್ ನೀಡಿದ ಎಸ್.ಎಂ.ಕೃಷ್ಣ

ಬೆಂಗಳೂರು,ಮೇ 8-ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರು ಕೋವಿಡ್ ಸೋಂಕಿತರ ನೆರವಿಗೆ ಮುಂದಾಗಿದ್ದಾರೆ.

ಮಂಡ್ಯ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಿಗೆ 100 ಆಕ್ಸಿಜನ್ ಸಿಲಿಂಡರ್ ಗಳು ಮತ್ತು 10,000 ಮಾಸ್ಕ್ ನೀಡುವ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಎಸ್.ಎಂ.ಕೃಷ್ಣ ಅವರು ಮಂಡ್ಯ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಮಾಸ್ಕ್ ಮತ್ತು ಆಕ್ಸಿಜನ್ ಸಿಲಿಂಡರ್ ಗಳನ್ನು ಹಸ್ತಾಂತರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಕುರಿತಂತೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವಂತ ಅವರು, ಮಹಾಮಾರಿ ಕೊರೊನಾ ಸೋಂಕಿನ ಕಾರಣದಿಂದ ಇಡೀ ಜನಸಮುದಾಯ ನಲುಗಿ ಹೋಗಿದ್ದು, ಲಕ್ಷಾಂತರ ಜನರ ಇದರ ಬಾಧೆಯಿಂದ ನಲುಗಿ ಹೋಗಿದ್ದಾರೆ. ಸರ್ಕಾರಗಳ ಪರಿಶ್ರಮ ಮತ್ತು ಆರೋಗ್ಯ ಸೇವಾ ಕಾರ್ಯಕರ್ತರು, ವೈದ್ಯರ ನಿರಂತ ಪರಿಶ್ರಮದ ಹೊರತಾಗಿಯೂ ಮಹಾಮಾರಿಯ ನಿಯಂತ್ರಣ ಸಾಧ್ಯವಾಗಿಲ್ಲ.

ಕೋವಿಡ್ 2ನೇ ಅಲೆ ಭೀಕರ ಸ್ವರೂಪದ ಲಕ್ಷಣಗಳನ್ನು ಹೊಂದಿದ್ದು, ಮಾನವನ ಶ್ವಾಸಕೋಶದ ಮೇಲೆ ಅಕ್ರಮಣಕಾರಿ ಪ್ರಭಾವದಿಂದಾಗಿ ಹಲವು ಸಾವು ನೋವುಗಳು ಉಂಟಾಗಿವೆ. ಈ ಸಮಯದಲ್ಲಿ ಸರ್ಕಾರ ಮತ್ತು ತಮ್ಮಗಳ ಪರಿಶ್ರಮದಿಂದ ಶಕ್ತಿ ಮೀರಿ ಶ್ರಮ ವಹಿಸಿದರೂ, ಸಾವಿರಾರೂ ಸಂಖ್ಯೆಯಲ್ಲಿ ಸೋಂಕಿತರು ವರದಿಯಾಗುತ್ತಿರುವುದರಿಂದ ಅವರುಗಳಿಗೆ ನಿಗದಿತ ಸಮಯದಲ್ಲಿ ಆಕ್ಸಿಜನ್ ಮತ್ತು ಔಷಧೋಪಚಾರ ಕಲ್ಪಿಸುವುದು ಕಷ್ಟಕರವಾಗಿದೆ.

ಈ ಸಂದರ್ಭದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಇತರ ಎಲ್ಲಾ ತಾಲೂಕಿನ ಆಸ್ಪತ್ರೆಗಳಲ್ಲಿ ನಿರಂತರ ಆಕ್ಸಿಜನ್ ಪೂರೈಕೆಗೆ ಅನುಕೂಲವಾಗಲು ನಾನು 100 ಜಂಬೊ ಆಕ್ಸಿಜನ್ ಸಿಲಿಂಡರ್ ಗಳನ್ನು ಮಂಡ್ಯ ಜಿಲ್ಲೆಯ ಶಾಶ್ವತ ಉಪಯೋಗಕ್ಕೆ ನೀಡಲು ತೀರ್ಮಾನಿಸಿ, ಶೀಘ್ರವಾಗಿ ಅದನ್ನು ಹಸ್ತಾಂತರಿಸಲು ಕ್ರಮವಹಿಸಿದ್ದೇನೆ. ಇವುಗಳನ್ನು ಅಗತ್ಯ ಇರುವ ಕಡೆ ಬಳಸಿಕೊಂಡು ಯಾವುದೇ ವ್ಯಕ್ತಿಗೆ ಆಕ್ಸಿಜನ್ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇನೆ.

ಅದೇ ರೀತಿ ಕೋವಿಡ್ ಮಹಾಮಾರಿಯಿಂದ ಜನರನ್ನು ರಕ್ಷಿಸಲು ಹಗಲು ರಾತ್ರಿ ದುಡಿಯುತ್ತಿರುವ ಜಿಲ್ಲೆಯ ವೈದ್ಯರು, ಆರೋಗ್ಯ ಕಾರ್ಯಕರ್ತರ ರಕ್ಷಣೆಗಾಗಿ 10 ಸಾವಿರ ಎನ್-95 ಮಾಸ್ಕ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ. ನಾರಾಯಣಗೌಡರವರ ಮೂಲಕ ಮಂಡ್ಯ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗುವುದು. ಇವುಗಳನ್ನು ಸೂಕ್ತವಾಗಿ ಬಳಸಿಕೊಂಡು, ಜನರ ಆರೋಗ್ಯ ರಕ್ಷಣೆಗೆ ಕ್ರಮವಹಿಸಲು ಕೋರಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: