ಮೈಸೂರು

ಕೊರೊನಾ ಸಂಕಷ್ಟ,ಬಡವರ ಹಸಿವು ನೀಗಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲ : ಮಾಜಿ ಶಾಸಕ ಎಂ ಕೆ ಸೋಮಶೇಖರ್

ಮೈಸೂರು,ಮೇ.8:-  ದೇಶವ್ಯಾಪಿ ಕೊರೋನಾ ಸೋಂಕು ಶರವೇಗದಲ್ಲಿ ಹರಡಿ ಲಕ್ಷಾಂತರ ಜನರು ಸಾಯುತ್ತಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರೆ ರಾಜ್ಯಗಳಾದ ತಮಿಳುನಾಡು,ಕೇರಳ,ಆಂಧ್ರಪ್ರದೇಶದ ಸರ್ಕಾರಗಳು ಬಡವರ ಪರ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು ಜನರ ನೋವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ.ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ  ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ನೂರಾರು ಜನಪರ ಯೋಜನೆಗಳನ್ನು ರೂಪಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದರು.ಆದರೆ ಇಂದಿನ ಬಿಜೆಪಿ ಸರ್ಕಾರ ಹೊಸ ಯೋಜನೆಗಳನ್ನು ಕೊಡುವುದಿರಲಿ ಇರುವ ಜನಪರ ಯೋಜನೆಗಳನ್ನು ರದ್ದುಗೊಳಿಸಿ ಬಡವರಿಗೆ ಕೊರೊನಾ ಸಂಕಷ್ಟದ ಜೊತೆಗೆ ಮತ್ತಷ್ಟು ತೊಂದರೆಗಳನ್ನು ಕೊಡುವ ಕೆಲಸವನ್ನು ಮಾಡಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದರು.

ಅವರಿಂದು ಕೆ.ಆರ್ ಮೊಹಲ್ಲಾದ ನಾರಾಯಣಶಾಸ್ತ್ರಿ ರಸ್ತೆಯ ಅಂಚೆ ಕಛೇರಿ ಶಾಖೆಯ ಮುಂಭಾಗ ಅಂಚೆ ಪತ್ರ ಚಳವಳಿ ನಡೆಸಿ ಮಾತನಾಡಿ ಬಿಜೆಪಿ ಸರ್ಕಾರ ಸುಭದ್ರ ಆಡಳಿತ ನೀಡುವಲ್ಲಿ  ಸಂಪೂರ್ಣವಾಗಿ ವಿಫಲವಾಗಿದೆ. ಒಂದೆಡೆ ಕೊರೋನಾದಿಂದ ಜನ ಸಾಯುತ್ತಿದ್ದರೆ, ಮತ್ತೊಂದೆಡೆ ಹಸಿವಿನಿಂದ ಸಾಯುತ್ತಿದ್ದಾರೆ.   ಅನ್ನಭಾಗ್ಯವನ್ನು ಮೊದಲಿನಂತೆ ಮುಂದುವರೆಸಿ,ಬಡವರ ಬದುಕಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಕೊರೊನಾ ಸೋಂಕಿನಿಂದ ರಸ್ತೆ ರಸ್ತೆಗಳಲ್ಲೇ ಬೀಳುತ್ತಿರುವ ರೋಗಿಗಳಿಗೆ ಸೂಕ್ತ ಹಾಸಿಗೆ, ಔಷಧ,ಆಮ್ಲಜನಕ ಒದಗಿಸಿ ಗುಣಮುಖರಾಗಿ ಸಾವಿನ ಸಂಖ್ಯೆ ಇಳಿಯುವಂತೆ ಕ್ರಮವಹಿಸಬೇಕಾಗಿ  ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪನವರಿಗೆ ಅಂಚೆ ಪತ್ರ ರವಾನಿಸುವ ಮೂಲಕ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ   ಮೈಸೂರು ನಗರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ ಕೆ ಅಶೋಕ್ ,ನಗರಾಧ್ಯಕ್ಷರಾದ ಆರ್ ಮೂರ್ತಿ,  ಸೇವಾದಳದ ಅಧ್ಯಕ್ಷರಾದ ಗಿರೀಶ್ ಮತ್ತಿತರರು  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: