ಮೈಸೂರು

ರಾಜ್ಯ ಸರ್ಕಾರ ಕೂಡಲೇ ಜಿಲ್ಲಾವಾರು ಆಕ್ಸಿಜನ್ ಕೋಟಾ ನಿಗದಿ ಮಾಡಲಿ : ಸಂಸದ ಪ್ರತಾಪ್ ಸಿಂಹ

ಮೈಸೂರು,ಮೇ.8:- ಚಾಮರಾಜನಗರ ಮಂಡ್ಯ ಹಾಸನ ನಾವು ಸಹೋದರರಿದ್ದಂತೆ. ಆಕ್ಸಿಜನ್ ವಿಚಾರದಲ್ಲಿ ನಮ್ಮ ನಡುವೆ ವಿರಸ ಮೂಡುವ  ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಪರಿಸ್ಥಿತಿ ತಪ್ಪಬೇಕಾದರೆ ರಾಜ್ಯ ಸರ್ಕಾರ ಕೂಡಲೇ ಜಿಲ್ಲಾವಾರು ಆಕ್ಸಿಜನ್ ಕೋಟಾ ನಿಗದಿ ಮಾಡಬೇಕು. ಕೋಟಾ ನಿಗದಿಯಾಗದ ಹೊರತು ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಕೆ.ಆರ್.ಆಸ್ಪತ್ರೆಯಲ್ಲಿ 680ಬೆಡ್ ಗಳಿವೆ. ಜಿಲ್ಲಾಸ್ಪತ್ರೆಯಲ್ಲಿ 400, ಟ್ರಾಮಾ ಸೆಂಟರ್ ನಲ್ಲಿ 200, ಇಎಸ್ ಐ ಆಸ್ಪತ್ರೆಯಲ್ಲಿ 50, ತುಳಸಿದಾಸ ಆಸ್ಪತ್ರೆಯಲ್ಲಿ 200, ತಾಲೂಕು ಕೇಂದ್ರಗಳಲ್ಲಿರುವ ಆಸ್ಪತ್ರೆಯಲ್ಲಿ 500, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ 270, ಪಂಚಕರ್ಮ ಆಸ್ಪತ್ರೆಯಲ್ಲಿ 300 ಸುಮಾರು 3000ಸಾವಿರ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್ ಬೆಡ್ ಗಳಿವೆ.  ಸುಮಾರು 140 ಸಣ್ಣಪುಟ್ಟ ಹಾಗೂ ದೊಡ್ಡ ಖಾಸಗಿ ಆಸ್ಪತ್ರೆಗಳನ್ನು ಗುರುತು ಮಾಡಿದ್ದು, ಅವರು ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಗೆ ಬೇಡಿಕೆ ಕೊಟ್ಟಿದ್ದಾರೆ ಅವರದ್ದೂ ಕೂಡ 2900ರಷ್ಟು ಬೆಡ್ ಗಳಿವೆ. 6000ಬೆಡ್ ಗಳಿಗೆ ಆಕ್ಸಿಜನ್, ರೆಮ್ಡಿಸಿವಿರ್ ನ್ನು ಪೂರೈಸಬೇಕಾದ ಒತ್ತಡದಲ್ಲಿದ್ದೇವೆ. ಹಾಗಾಗಿ ನಿನ್ನೆ ಕೂಡ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಮನವಿಯನ್ನು ಮಾಡಿಕೊಂಡಿದ್ದೆ. ಒಂದು ರೀತಿಯ ಒತ್ತಡದಲ್ಲಿ ನಾವಿದ್ದೇವೆ. ಮಂಡ್ಯ, ಚಾಮರಾಜನಗರದವರು ಇಲ್ಲಿಗೆ ಬಂದಾಗ ನಮಗೆ ಆಕ್ಸಿಜನ್ ಕೊಡಲು ಸಾಧ್ಯವಾಗದಿದ್ದರೆ. ಮೈಸೂರನ್ನು ಮತ್ತೆ ಕಟಕಟೆಯಲ್ಲಿ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣ ಆಗಲಿದೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ನಾನು ಬಹಳ ಸದ್ದುದ್ದೇಶದಿಂದ ಆಕ್ಸಿಜನ್ ಕೋಟಾ ನಿಗದಿಗೆ ಮನವಿ ಮಾಡುತ್ತಿದ್ದೇ‌ನೆ. ಮೈಸೂರಿನಲ್ಲಿ 6ಸಾವಿರ ಬೆಡ್‌  ಗಳ ಆಕ್ಸಿಜನ್ ವ್ಯವಸ್ಥೆ ಆಗುತ್ತಿದೆ. ನಮಗೂ ಆಕ್ಸಿಜನ್ ಕೊರತೆ ಉಂಟಾಗಬಹುದು. ಸರ್ಕಾರ ತುರ್ತಾಗಿ ಕೋಟಾ ನಿಗದಿ ಮಾಡಲಿ. ಮುಖ್ಯಮಂತ್ರಿಗಳು ಇದನ್ನ ಆದಷ್ಟು ಬೇಗ ಮಾಡುತ್ತಾರೆಂಬ ವಿಶ್ವಾಸ ಇದೆ ಎಂದು  ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಒಳ್ಳೆ ಕೆಲಸ ಮಾಡಿದ ಸಂಸದರನ್ನು ಟೀಕಿಸುವ ಬದಲು ಬೆಡ್ ಗಳ ವ್ಯವಸ್ಥೆ ಮಾಡಿ  ಎಂದು ವಿಪಕ್ಷಗಳಿಗೆ   ತಿರುಗೇಟು ನೀಡಿದರು.

ಬಿಬಿಎಂಪಿಯ ಬೆಡ್ ಬ್ಲಾಕ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ   ಪ್ರತಿಕ್ರಿಯಿಸಿದ ಅವರು ಸಂಸದ  ತೇಜಸ್ವಿ ಸೂರ್ಯ ಅವರು ಒಂದು ಧರ್ಮದವರ ಪಟ್ಟಿ ಓದಿದರು ಎಂದು ಅವರನ್ನು ಟೀಕಿಸುತ್ತ ಈ ವಿಚಾರದಲ್ಲಿ ಹಿಮ್ಮುಖರಾಗುವಂತೆ ಮಾಡುವುದು ಸರಿಯಲ್ಲ. ವಿರೋಧ ಪಕ್ಷಗಳು ಒಳ್ಳೆಯ ಕೆಲಸ ಮಾಡಿದ ಸಂಸದರನ್ನು ಟೀಕಿಸಲು ಸಮಯ ವ್ಯರ್ಥ ಮಾಡುವ ಬದಲು  ತಮ್ಮ ಕ್ಷೇತ್ರಗಳಲ್ಲಿ ಬೆಡ್‌ ಗಳ ವ್ಯವಸ್ಥೆ ಮಾಡಲಿ. ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಕಡೆಗಳಲ್ಲಿ ತೇಜಸ್ವಿ ಸೂರ್ಯನನ್ನು ಟೀಕಿಸುವುದು  ಯಾರು ಒಪ್ಪಿಕೊಳ್ಳುವ ಮಾತಲ್ಲ ಎಂದು ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: