ಕರ್ನಾಟಕಪ್ರಮುಖ ಸುದ್ದಿಮೈಸೂರು

ಔಷಧ ತಯಾರಿಕಾ ಕಂಪನಿ ಜುಬಿಲಿಯಂಟ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಭೇಟಿ

ಮೈಸೂರು, ಮೇ.10: – ಕೋವಿಡ್ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿರುವಂತೆ ರೆಮ್ಡಿಸಿವಿರ್ ಔಷಧಿಗೆ ಬೇಡಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸೋಮವಾರ ನಂಜನಗೂಡಿನ ಔಷಧ ತಯಾರಿಕ ಕಂಪನಿ ಜುಬಿಲೆಂಟ್ ಕಾರ್ಖಾನೆಗೆ ಭೇಟಿ ನೀಡಿ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ್ ಅವರೊಂದಿಗೆ ಚರ್ಚಿಸಿದರು.

ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ವಾಗುತ್ತಿದ್ದು, ಇದರಿಂದ ರೆಮ್ಡಿಸಿವಿರ್ ಔಷಧಿಗೆ ಬೇಡಿಕೆಯು ಹೆಚ್ಚಾದ ಹಿನ್ನೆಲೆಯಲ್ಲಿ ಔಷಧಿಯ ಅಭಾವ ಉಂಟಾಗುವ ಭೀತಿ ಉಂಟಾಗಿದೆ. ಹೀಗಾಗಿ ರೆಮ್ಡಿಸಿವಿರ್ ಉತ್ಪಾದಿಸುವ ಜುಬಿಲೆಂಟ್ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಕಾರ ಕೇಳಿದರು.

ರಾಜ್ಯದಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್‌ಗಾಗಿ ಸರ್ಕಾರದ ಮೇಲೆ ಒತ್ತಡ ಉಂಟಾಗಿದೆ. ಇದರಿಂದ ಕೋವಿಡ್ ಪ್ರಕರಣಗಳು ಕಡಿಮೆಯಾಗುವವರೆಗೆ ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಔಷಧಿಯನ್ನು ಉತ್ಪಾದಿಸಲು ತಿಳಿಸಿದರು.

ಕೋವಿಡ್ ಮೊದಲ ಅಲೆಯಲ್ಲಿ ಜುಬಿಲೆಂಟ್ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಇಂತಹ ಪ್ರಕರಣಗಳು ಈ ಕಾರ್ಖಾನೆಯಿಂದ ಬರದಿರುವುದು ಸಂತೋಷದ ವಿಷಯವಾಗಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಮಾನ್ಯವಾಗಿ ಎಲ್ಲರೂ ರೆಮ್ಡಿಸಿವಿರ್ ಕೇಳುತ್ತಿದ್ದಾರೆ. ಕೋವಿಡ್ 19 ಚಿಕಿತ್ಸೆಗೆ ರೆಮ್ಡಿಸಿವಿರ್ ಪರಿಣಾಮಕಾರಿ ಔಷದಿಯಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಕೊವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಹಾಗಾಗಿ ಮೈಸೂರು ಜಿಲ್ಲೆಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲಾಡಳಿತದ ಮನವಿ ಮೇರೆಗೆ ಪ್ರತಿನಿತ್ಯ ಅಗತ್ಯ ಇರುವ ರೆಮ್ಡಿಸಿವಿರ್ ಲಸಿಕೆಯನ್ನು ಒದಗಿಸಿಕೊಡಬೇಕೆಂದು ಕೋರಿದರು.

ಜುಬಿಲರಂಟ್ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ್ ಅವರು ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಬೇಡಿಕೆಯ ಪತ್ರವನ್ನು ಕಳುಹಿಸಿಕೊಟ್ಟರೆ ಆಡಳಿತ ಮಂಡಳಿಯ ಗಮನಕ್ಕೆ ತಂದು ರೆಮ್ಡಿಸಿವಿರ್ ಔಷಧಿ ನೀಡಲು ಪ್ರಯತ್ನಿಸಲಾಗುವುದು ಎಂದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರ್ಷವರ್ದನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮುಖಂಡರಾದ ಶ್ರೀವತ್ಸ, ವಿಶೇಷ ಕರ್ತವ್ಯಾಧಿಕಾರಿ ದಿನೇಶ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.

Leave a Reply

comments

Related Articles

error: