ದೇಶಪ್ರಮುಖ ಸುದ್ದಿ

ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ; 11 ಮಂದಿ ಕೋವಿಡ್ ಸೋಂಕಿತರ ಸಾವು ; ತಿರುಪತಿಯಲ್ಲಿ ಘಟನೆ

ದೇಶ(ತಿರುಪತಿ)ಮೇ.11:- ಸೋಮವಾರ ತಡರಾತ್ರಿ ಇಲ್ಲಿನ ಸರ್ಕಾರಿ ರುಯಾ ಆಸ್ಪತ್ರೆಯಲ್ಲಿ ಐಸಿಯು ಒಳಗೆ ಆಮ್ಲಜನಕದ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕನಿಷ್ಠ 11 ಕೋವಿಡ್ -19 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿ ನಾರಾಯಣನ್   ಮಾಹಿತಿ ನೀಡಿದ್ದಾರೆ.

ಆಮ್ಲಜನಕದ ಸಿಲಿಂಡರ್ ಅನ್ನು ಮರುಪೂರಣಗೊಳಿಸುತ್ತಿದ್ದ ವೇಳೆ ಐದು ನಿಮಿಷಗಳನ್ನು ತೆಗೆದುಕೊಂಡಿದ್ದು, ಇದು ಆಮ್ಲಜನಕದ ಪೂರೈಕೆಯಲ್ಲಿನ ವ್ಯತ್ಯಯಕ್ಕೆ ಕಾರಣವಾಗಿ ರೋಗಿಗಳ ಸಾವಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.   “ಐದು ನಿಮಿಷಗಳಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಈಗ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಈ ಕಾರಣದಿಂದಾಗಿ, ಹೆಚ್ಚಿನ ರೋಗಿಗಳ ಸಾವನ್ನು ತಡೆಯಲು ನಮಗೆ ಸಾಧ್ಯವಾಯಿತು” ಎಂದು ಹೇಳಿದ್ದಾರೆ. ರೋಗಿಗಳ ಮೇಲ್ವಿಚಾರಣೆಗಾಗಿ ಸುಮಾರು 30 ವೈದ್ಯರನ್ನು ತಕ್ಷಣ ಐಸಿಯುಗೆ ಕಳುಹಿಸಲಾಗಿತ್ತು. ನಿಮಿಷದಲ್ಲಿ ಮತ್ತೆ ಆಕ್ಸಿಜನ್ ಪುನಃ ಪೂರೈಕೆ ಪ್ರಾರಂಭಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಲ್ಲ ಮತ್ತು ಸಾಕಷ್ಟು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ನಿರ್ದೇಶಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಜಗನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: