ಕರ್ನಾಟಕಪ್ರಮುಖ ಸುದ್ದಿ

ಕರುಣೆ ಇಲ್ಲದ ಸರ್ಕಾರ ಜನರನ್ನು ಪೊಲೀಸರ ಮೂಲಕ ಥಳಿಸಿ ದುಂಡಾವರ್ತನೆ ತೋರಿಸುತ್ತಿದೆ:  ದಿನೇಶ್ ಗುಂಡೂರಾವ್ ಕಿಡಿ

ಬೆಂಗಳೂರು,ಮೇ 11-ಕರುಣೆ ಇಲ್ಲದ ರಾಜ್ಯ ಸರ್ಕಾರ ಜನರನ್ನು ಪೊಲೀಸರ ಮೂಲಕ ಥಳಿಸಿ ದುಂಡಾವರ್ತನೆ ತೋರಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಜನರನ್ನು ಥಳಿಸಿ ವಿಕೃತ ಸಂತೋಷ ಪಡುತ್ತಿರುವ ಈ ಸರ್ಕಾರಕ್ಕೆ ಮಾನವೀಯತೆಯಿಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ. ಪೊಲೀಸರಿಗೆ ಜನರನ್ನು ಅಟ್ಟಾಡಿಸಿಕೊಂಡು ಹೊಡೆಯಲು ಈ ಸರ್ಕಾರ ಸೂಚಿಸಿದೆಯೆ ಎಂಬುದನ್ನು ಪೊಲೀಸ್ ಮಹಾ ನಿರ್ದೇಶಕರು ಸ್ಪಷ್ಟಪಡಿಸಲಿ. #ಲಾಠಿ ದೌರ್ಜನ್ಯ ನಿಲ್ಲಲಿ ಎಂದಿದ್ದಾರೆ.

ಯಡಿಯೂರಪ್ಪನವರೆ ಲಾಕ್‌ಡೌನ್ ಹೆಸರಲ್ಲಿ ನೀವು ರಾಜ್ಯದ ಜನತೆಗೆ ಕೊಡಬೇಕಾಗಿರುವುದು ಲಾಠಿ ಏಟುಗಳನಲ್ಲ.ನೀವು ಕೊಡಬೇಕಾಗಿರುವುದು ಆರೋಗ್ಯ ಭದ್ರತೆ ಮತ್ತು ಆರ್ಥಿಕ ಭದ್ರತೆ. ನಿಮ್ಮ ಸರ್ಕಾರ ಜನರಿಗೆ ಇಲ್ಲಿಯವರೆಗೂ ಯಾವ ಪ್ಯಾಕೇಜ್ ಕೊಟ್ಟಿದೆ? ಕನಿಷ್ಟ ಪಕ್ಷ ನಿಮ್ಮ ಸರ್ಕಾರದಿಂದ ಬಡವರಿಗೆ ಆಹಾರದ ಕಿಟ್ ಕೊಡುವ ವ್ಯವಸ್ಥೆಯಾದರೂ ಆಗಿದೆಯೆ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳೆ, ‘ಅಕ್ಕನ ಮಗಳು ಬಡವಾಗಬಾರದು, ಅಕ್ಕಿಯೂ ಖಾಲಿಯಾಗಬಾರದು’ ಎಂದರೆ ಹೇಗೆ? ಮೊದಲು ಬಡ ಜನರಿಗೆ ಸಹಾಯಧನ ಹಾಗೂ ಆಹಾರದ ಕಿಟ್ ಕೊಡುವ ವ್ಯವಸ್ಥೆ ಮಾಡಿ. ನಂತರ ನಿಮ್ಮ ಕಠಿಣ ಲಾಕ್‌ಡೌನ್ ಜಾರಿ ಮಾಡಿ. ಬಡವ ಒಪ್ಪೊತ್ತಿನ ಊಟವನ್ನು ದುಡಿದು ತಿನ್ನಬೇಕು. ದುಡಿಯುವವನ ಕೈ ಕಟ್ಟಿ ಹಾಕಿದರೆ, ಅವನೇನು ಮನೆಯಲ್ಲಿ ಮಣ್ಣು ತಿನ್ನಬೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಲಸಿಕೆ ವಿತರಣೆಯಲ್ಲೂ ರಾಜಕೀಯ ಇದು ಅತ್ಯಂತ ಕೀಳುಮಟ್ಟದ ನಡೆ. ಒಂದು ಕಡೆ ಲಸಿಕೆ ಸರಬರಾಜಿನಲ್ಲಿ ನಿತ್ಯ ಸುಳ್ಳು ಹೇಳಿಕೆ. ಇನ್ನೊಂದು ಕಡೆ ಅವರ ಕ್ಷೇತ್ರಕ್ಕೆ ಹೆಚ್ಚು ಕೊಡುಸುವ ಮುಖಾಂತರ ಅಪರಾಧ ಎಸಗಿದ್ದಾರೆ. ಡಾ.ಸುಧಾಕರ್ ಅವರು ಅರೋಗ್ಯ ಸಚಿವರಾಗುವುದಕ್ಕೆ ನಾಲಾಯಕ್ಕು. ಅವರನ್ನು ವಜಾಗಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಕಣ್ಣಿಗೆ ರಾಚುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಕಳಂಕ ರಾಜ್ಯದ ಹೆಗಲೇರಿದೆ. ಈ ಸರ್ಕಾರ ತಜ್ಞರ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವಿದು. ರಾಜ್ಯ ಸರ್ಕಾರ ಸತ್ತು ಹೋಗಿದೆ. ಇನ್ನುಳಿದಿರುವುದು ಈ ಸರ್ಕಾರದ ಶವ ಸಂಸ್ಕಾರವೊಂದೆ ಎಂದು ಆಕ್ರೋಶದಿಂದ ಟ್ವೀಟ್ ಮಾಡಿದ್ದಾರೆ.

ಜನ ಕೊರೊನಾ ಬಂದಾದರೂ ಸಾಯಲಿ., ಹೊಟ್ಟೆಗೆ ಅನ್ನವಿಲ್ಲದೆ ಸಾಯಲಿ. ಆದರೆ ಜನರನ್ನು ದೋಚುವುದೇ ಕೇಂದ್ರ ಸರ್ಕಾರದ ದುಷ್ಟ ಉದ್ದೇಶವಾಗಿದೆ. ದೇಶ ಕೊರೊನಾ ಅಟ್ಟಹಾಸದಲ್ಲಿದೆ. ಈ ಸಂಕಷ್ಟ ಕಾಲದಲ್ಲಿ ತೈಲ ಬೆಲೆ ಏರಿಸಿದ ಕೇಂದ್ರ ಸರ್ಕಾರಕ್ಕೆ ಜನರ ಕಷ್ಟ ಅರ್ಥವಾಗುತ್ತಿಲ್ಲವೆ? ಸಂತೆಯಲ್ಲಿ ಸುಂಕದವನ ಮುಂದೆ ಗೋಳು ಹೇಳಿಕೊಂಡಂತಾಗಿದೆ ದೇಶದ ಜನರ ಸ್ಥಿತಿ ಎಂದಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: