ಮೈಸೂರು

ಪ್ರಾಣವನ್ನೇ ಒತ್ತೇ ಇಡುವ ಸಾಹಸಿಗರು : ರೋಮಾಂಚನಗೊಳಿಸಲಿದೆ ಪ್ರಾಣಿ-ಪಕ್ಷಿಗಳ ಚಾಣಾಕ್ಷತನ

ಪ್ರಾಣವನ್ನೇ ಒತ್ತೆಯಿಟ್ಟು ಮೈನವಿರೇಳಿಸಿ, ಎದೆ ನಡುಗಿಸಿ ರೋಮಾಂಚನಗೊಳಿಸುವ ಸಾಹಸ, ಶ್ವಾನ, ಒಂಟೆ, ಪಾರಿವಾಳಗಳ ಚಾಣಾಕ್ಷತನ, ಬುದ್ದಿವಂತಿಕೆ, ಜೋಕರ್‍ಗಳ ಕಾಮಿಡಿ  ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಪ್ರಪಂಚದಾದ್ಯಂತ ವಿಶಿಷ್ಟ ಹೆಸರುಗಳಿಸಿ 10 ವರ್ಷಗಳ ಬಳಿಕ ಮೈಸೂರಿಗೆ ಆಗಮಿಸಿರುವ ಗ್ರೇಟ್ ಬಾಂಬೆ ಸರ್ಕಸ್‍ನಲ್ಲಿ ಇಂತಹ ರೋಮಾಂಚನಕಾರಿ ಕಸರತ್ತುಗಳು ಗಮನ ಸೆಳೆಯುತ್ತಿವೆ.  ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಸರ್ಕಸ್ ನಡೆಯುತ್ತಿತ್ತು. ಆದರೆ ಈ ಬಾರಿ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಏಪ್ರಿಲ್‍ನಲ್ಲಿ ಆಯೋಜಿಸಲಾಗಿದೆ. ವಿಶ್ವದಾದ್ಯಂತ ಸಾವಿರಾರು ಪ್ರದರ್ಶನ ನೀಡಿರುವ ಬಾಂಬೆ ಸರ್ಕಸ್ ಮೈಸೂರಿನ ಜನತೆಯನ್ನು ಆಕರ್ಷಿಸಲು ನಗರಕ್ಕೆ ಆಗಮಿಸಿದೆ ಅದರಲ್ಲಿ ಯಶಸ್ವಿಯೂ ಆಗಿದೆ.
ಬಾಂಬೆ ಸರ್ಕಸ್ ಇತಿಹಾಸ: ಗ್ರೇಟ್ ಬಾಂಬೆ ಸರ್ಕಸ್‍ಗೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. 1920ರಲ್ಲಿ ಬಾಬುರಾಂ ಕದಂ ಅವರಿಂದ ಸ್ಥಾಪಿತವಾಗಿ ಪಾಕಿಸ್ತಾನದ ಭಾಗವಾಗಿರುವ ಸಿಂದ್, ಪಂಜಾಬ್‍ನಲ್ಲಿ ಪ್ರದರ್ಶನ ನೀಡುವುದರೊಂದಿಗೆ ತನ್ನ ಮೊದಲ ಹೆಜ್ಜೆಯನ್ನಿರಿಸಿತು. 1947ರಲ್ಲಿ ಕೆ.ಎಂ.ಕುಣ್ಣಿ ಕೃಷ್ಣನ್ ಅವರ ವೈಟ್ ವೇ, ಲಯನ್ ಸರ್ಕಸ್‍ನೊಂದಿಗೆ ವಿಲೀನವಾಗಿ ಗ್ರೇಟ್ ಬಾಂಬೆ ಸರ್ಕಸ್ ಆಗಿ ಹೊರಹೊಮ್ಮಿತು. 1953ರಲ್ಲಿ ಕುಣ್ಣಿ ಕೃಷ್ಣನ್ ಅವರ ನಿಧನಾನಂತರ ಅವರ ಸಹೋದರ ಕೆ.ಎಂ.ಬಾಲಗೋಪಾಲ್ ಪಾಲುದಾರರಾದರು. ಇಂದು ಕಲಾವಿದರು, ತಂತ್ರಜ್ಞರ ಶ್ರಮದಿಂದ ದೇಶದ ಅತಿ ದೊಡ್ಡ ಸರ್ಕಸ್ ಕಂಪನಿಯಾಗಿ ಬೆಳೆದುನಿಂತಿದೆ.
ವಿಶ್ವಮನ್ನಣೆ ಪಡೆದ ಸರ್ಕಸ್: ಗ್ರೇಟ್ ಬಾಂಬೆ ಸರ್ಕಸ್ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ ಗಣ್ಯಾತಿಗಣ್ಯರಿಗೂ ಅಚ್ಚುಮೆಚ್ಚು. ನೇಪಾಳದ ಮಹಾರಾಜ, ಮಹಾರಾಣಿ, ಮಾಜಿ ಪ್ರಧಾನಿ ಇಂದಿರಾಗಾಂಧಿ, ವಿವಿ ಗಿರಿ, ವಿ.ಕೆ.ಕೃಷ್ಣಮೆನನ್, ಸಿದ್ದಾರ್ಥ್ ಶಂಕರ್‍ರಾಯ್, ಇಎಂಎಸ್ ನಂಬೂದಿರಿಪಾಡ್, ಇ.ಕೆ.ನಯನಾರ್, ಎಂ.ಜಿ.ರಾಮಚಂದ್ರನ್ ಸೇರಿದಂತೆ ಭಾರತ ಹಾಗೂ ವಿಶ್ವದ ಅನೇಕ ರಾಷ್ಟ್ರಗಳ ಗಣ್ಯರು ಖುದ್ದಾಗಿ ಸರ್ಕಸ್ ವೀಕ್ಷಿಸಿದ್ದಾರಲ್ಲದೆ ಮೆಚ್ಚುಗೆಯ ಮಾತಯಗಳನ್ನಾಡಿರುವುದು ಬಾಂಬೆ ಸರ್ಕಸ್‍ನ ಜನಪ್ರಿಯತೆಯನ್ನು ತಿಳಿಸುತ್ತದೆ. ಅಲ್ಲದೆ ಕನ್ನಡ, ಹಿಂದಿ, ತೆಲುಗು, ತಮಿಳು ಚಿತ್ರಗಳು ಚಿತ್ರೀಕರಣಗೊಂಡಿವೆ.
ವಿಶ್ವ ಕಲಾವಿದರ ಸಮಾಗಮ: ಗ್ರೇಟ್ ಬಾಂಬೆ ಸರ್ಕಸ್‍ನಲ್ಲಿ ಕೇವಲ ಭಾರತದ ಕಲಾವಿದರಲ್ಲದೆ ವಿಶ್ವದ ಅನೇಕ ರಾಷ್ಟ್ರಗಳ ಸಮಾಗಮವಿದೆ. ಆಫ್ರಿಕಾ, ಏಥೋಪಿಯನ್ ಹಾಗೂ ಚೈನಿಸ್ ಕಲಾವಿದರು ತಮ್ಮ ಅನನ್ಯ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾರೆ. ಒಟ್ಟು 300 ಜನ ಕೆಲಸ ಮಾಡುತ್ತಿದ್ದು 30 ಮಂದಿ ಪುರುಷರು, 60 ಮಹಿಳೆಯರು, 40 ಮಂದಿ ಮೇಲ್ವಿಚಾರಕರು ಹಾಗೂ 180 ಮಂದಿ ಇತರ ಕೆಲಸಗಾರರು ಮನರಂಜನೆ ನೀಡಲು ಪ್ರತಿನಿತ್ಯ ಶ್ರಮಪಡುತ್ತಾರೆ.
ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮ: ಸರ್ಕಸ್ ಕಂಪನಿಗಳ ಭವಿಷ್ಯ ನಿಂತಿರುವುದೇ ಪ್ರೇಕ್ಷಕರಿಂದ. ಅದರಲ್ಲೂ ಪುಟಾಣಿ ಪ್ರೇಕ್ಷಕರು ಸರ್ಕಸ್‍ನ ಜೀವಾಳ. ಹಾಗಾಗಿಯೇ ಗ್ರೇಟ್ ಬಾಂಬೆ ಸರ್ಕಸ್‍ನಲ್ಲಿ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಶ್ವಾನಗಳಿಂದ ಸಂಖ್ಯೆ ಗುರುತಿಸುವುದು, ಜಿಗಿಯುವುದು, ಸೋಮಾರಿತನ ಪ್ರದರ್ಶಿಸುವುದು, ಅತಿ ಎತ್ತರದ ಹಾಗೂ ಅತಿ ಚಿಕ್ಕ ಸೈಕಲ್ ಸಾಹಸ, ಸೈಕಲ್ ಬಿಡಿ ಭಾಗ ತೆಗೆದು ಸಾಹಸ, ಒಂಟೆ ಸಾಹಸ, ಪಕ್ಷಿಗಳಿಂದ ವಿವಿಧ ಕ್ರೀಡೆ, ಕಬ್ಬಿಣದ ಅತಿಬಾರ ಎತ್ತುವ ಸಾಹಸ, ಮೋಟಾರ್ ಸೈಕಲ್ ಸಾಹಸ, ಜೋಕರ್‍ಗಳಿಂದ ಹಾಸ್ಯ ಕಾರ್ಯಕ್ರಮ ಸೇರಿದಂತೆ 32 ವೈವಿಧ್ಯಮಯ ಸಾಹಸಗಳು ಕಿರಿಯ ಹಾಗೂ ಹಿರಿಯರನ್ನು ಆಯಸ್ಕಾಂತದ ರೀತಿಯಲ್ಲಿ ಸೆಳೆಯುತ್ತಿವೆ.

ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಗೆ ಮನರಂಜನೆಯ ರಸದೌತಣ ನೀಡುವ ಸಲುವಾಗಿ ನಗರಕ್ಕೆ ಆಗಮಿಸಿರುವ ಗ್ರೇಟ್ ಬಾಂಬೆ ಸರ್ಕಸ್ 40 ದಿನಗಳವರೆಗೆ ಪ್ರದರ್ಶನ ಕಾಣಲಿದೆ. ಪ್ರತಿದಿನ ಮೂರು ಪ್ರದರ್ಶನವಿದ್ದು ಮಧ್ಯಾಹ್ನ 1ಗಂಟೆ, ಸಂಜೆ 4ಗಂಟೆ ಹಾಗೂ ರಾತ್ರಿ 7ಗಂಟೆಗೆ ಪ್ರದರ್ಶನ ಕಾಣಲಿದೆ. ಪ್ರವೇಶದರ 300ರೂ, 200ರೂ ಹಾಗೂ 100 ರೂ ಇದೆ. ಬಿಸಿಲು, ಮಳೆಗೆ ಜಗ್ಗದ ವಾಟರ್‍ಪ್ರೂಫ್ ಟೆಂಟ್ ಹಾಕಿದ್ದು ಅಗ್ನಿ ಅವಘಡಗಳು ಸಂಭವಿಸಿದರೂ ಯಾವುದೇ ಸಮಸ್ಯೆಯಾಗದಂತಹ ಫೈರ್ ಪ್ರೂಫ್ ಟೆಂಟ್ ಹಾಕಲಾಗಿದೆ.

ಸರ್ಕಸ್ ಪಿಆರ್‍ಓ ನಾಗೇಶ್ ಮಾತನಾಡಿ ಸರ್ಕಸ್ ಕಲಾವಿದರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮನರಂಜನೆ ನೀಡುವ ನೈಜ ಕಲೆ. ಗ್ರೇಟ್ ಬಾಂಬೆ ಸರ್ಕಸ್ ವಿಶ್ವದಾದ್ಯಂತ ಜನಮನ್ನಣೆ ಗಳಿಸಿದ್ದು, ಮೈಸೂರಿನ ಜನತೆಗೆ ಮನರಂಜನೆಯ ರಸದೌತಣ ನೀಡಲು 10ವರ್ಷಗಳ ಬಳಿಕ ಮೈಸೂರಿಗೆ ಬಂದಿದೆ. ಇತ್ತೀಚಿನ ಆಧುನಿಕ ಯುಗದ ಭರಾಟೆಯಲ್ಲಿ ಸರ್ಕಸ್ ಕಲೆ ಮೂಲೆಗುಂಪಾಗುವ ಆತಂಕದಲ್ಲಿದೆ. ಹಾಗಾಗಿ ಐತಿಹಾಸಿಕ ಕಲೆಯನ್ನು ಉಳಿಸಿ, ಬೆಳೆಸುವ ಹಿನ್ನೆಲೆಯಲ್ಲಿ ಸರ್ಕಸ್‍ಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಗ್ರೇಟ್ ಬಾಂಬೆ ಸರ್ಕಸ್ ನುರಿತ ಕಲಾವಿದರನ್ನು ಹೊಂದಿದ್ದು ಮನರಂಜನೆ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: