ಕರ್ನಾಟಕಪ್ರಮುಖ ಸುದ್ದಿ

ಬ್ಲಾಕ್‌ ಫಂಗಸ್: ಎರಡು ದಿನದಲ್ಲಿ ವರದಿ ನೀಡಲು ತಜ್ಞರಿಗೆ ಸೂಚಿಸಿದ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು,ಮೇ 12- ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲಾಕ್‌ ಫಂಗಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ತಜ್ಞರಿಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೂಚನೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನ ಜತೆಗೆ ಬ್ಲ್ಯಾಕ್ ಫಂಗಸ್ ಬಾಧಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ತಜ್ಞರು ಹಾಗೂ ವೈದ್ಯಾಧಿಕಾರಿಗಳ ಜತೆಗೆ ಚರ್ಚಿಸಿದ್ದು, ಅಧ್ಯಯನ ನಡೆಸಿ 2 ದಿನಗಳಲ್ಲಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ತಾಂತ್ರಿಕ ತಜ್ಞರ ಸಲಹಾ ಸಮಿತಿಗೆ ಒಪ್ಪಿಸಲಾಗಿದೆ ಎಂದರು.

ಬ್ಲಾಕ್ ಫಂಗಸ್ ಯಾವ ರೀತಿ ಬರುತ್ತಿದೆ. ಅದರ ಚಿಕಿತ್ಸೆ ವಿಧಾನ ಹೇಗಿರಬೇಕು? ಸರ್ಕಾರದ ನಿಲುವು ಏನಾಗಬೇಕು? ಈ ಬಗ್ಗೆ ವರದಿ ತರಿಸಿ ಉನ್ನತ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.

ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ಘೋಷಿಸಿದ್ದು, ದೇಶದಲ್ಲಿಯೇ ಮೊದಲ ರಾಜ್ಯ ನಮ್ಮದು. ಇದಕ್ಕಾಗಿ ಕಳೆದ ವರ್ಷ 350 ಕೋಟಿ ರೂ.ಖರ್ಚು ಮಾಡಿದ್ದೇವೆ. ಬೇರೆ ದೇಶಗಳಲ್ಲಿ ಕೊರೊನಾ ಸೋಂಕಿತರ ಜತೆ ಹೇಗೆ ಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ. ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ಪ್ರಜೆಯೇ ದೇಶಕ್ಕೆ ಮರಳಿದರೆ 14 ದಿನಗಳ ಹೋಮ್ ಕ್ವಾರಂಟೈನ್ ಗೆ 1.60 ಲಕ್ಷ ರೂ. ಶುಲ್ಕ ವಿಧಿಸುತ್ತಾರೆ. ನಮ್ಮಲ್ಲಿ ಪರೀಕ್ಷೆ, ಕೊರೊನಾ ಆರೈಕೆ ಕೇಂದ್ರ, ಚಿಕಿತ್ಸೆ ಎಲ್ಲವೂ ಉಚಿತ. ಬ್ಲ್ಯಾಕ್ ಫಂಗಸ್ ವಿಚಾರದಲ್ಲೂ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸುಧಾಕರ್ ಭರವಸೆ ನೀಡಿದರು.

ಕೋವಿಡ್‌ ಎರಡನೇ ಅಲೆ ಪ್ರಾರಂಭದಲ್ಲಿ ಪ್ರಮುಖ ನಗರಗಳಲ್ಲಿ ಕಂಡುಬರುತ್ತದೆ. ನಂತರ ಜಿಲ್ಲೆಗಳಲ್ಲಿ ಏರಿಕೆ ಆಗುತ್ತದೆ. ಮುಂದಿನ ಎರಡು ಮೂರು ವಾರಗಳಲ್ಲಿ ಬೆಂಗಳೂರಿನಲ್ಲಿ ಹತೋಟಿಗೆ ಬರುತ್ತದೆ. ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ಏರಿಕೆ ಆಗುತ್ತದೆ. ಇದಕ್ಕೆ ಸಿದ್ಧತೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇವಾಗಿನಿಂದಲೇ ಕೋವಿಡ್‌ ಕೇರ್ ಸೆಂಟರ್‌ ಹಾಗೂ ಇತರ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಗಳಾದ ಕೆ.ಆರ್‌.ಪುರಂ ಹೊಸಕೋಟೆ, ಚಿಕ್ಕಬಳ್ಳಾಪುರ ತಾಲ್ಲೂಕುಗಳಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಸ್ಥಳೀಯವಾಗಿ ಹೇಗೆ ವೆಂಟಿಲೇಟರ್‌ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತಾರಾ ಇಲ್ಲವಾ, ನ್ಯೂನ್ಯತೆ ಏನಿದೆ? ಈ ನಿಟ್ಟಿನಲ್ಲಿ ಪ್ರವಾಸ ಮಾಡಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದರು.

2,480 ವೈದ್ಯರ ನೇಮಕ: ತಾಲೂಕು ಆಸ್ಪತ್ರೆಗಳ ವಿಶೇಷ ತಜ್ಞರು, ಸಾಮಾನ್ಯ ಕರ್ತವ್ಯದ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಇನ್ನೆರಡು ದಿನಗಳಲ್ಲಿ ಒಟ್ಟು 2,480 ವೈದ್ಯರ ನೇಮಕವಾಗಲಿದೆ. ಸಂಭಾವ್ಯ ಕೊರೊನಾ 2ನೇ ಅಲೆ ಎದುರಿಸುವುದಕ್ಕಾಗಿ ಕಳೆದ 4-5 ತಿಂಗಳಿಂದ ಅಗತ್ಯವಿರುವ ವೈದ್ಯರ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈಗ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಒಂದರೆಡು ದಿನಗಳಲ್ಲಿ ನೇಮಕ ಅಧಿಸೂಚನೆ ಪ್ರಕಟವಾಗಲಿದೆ ಎಂದರು.

780 ವಿಶೇಷ ತಜ್ಞರು ಸೇರಿದಂತೆ 2,480 ವೈದ್ಯರ ನೇಮಕವಾಗಲಿದ್ದು, ಅವರೆಲ್ಲರನ್ನು ತಾಲೂಕು ಆಸ್ಪತ್ರೆಗಳಿಗೆ ನಿಯೋಜಿಸಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿನ ಅರಿವಳಿಕೆ, ಚಿಕಿತ್ಸಕ ತಜ್ಞರ ಕೊರತೆ ನಿವಾರಣೆಯಾಗಲಿದೆ ಎಂದು ತಿಳಿಸಿದರು. (ಎಂ.ಎನ್)

 

 

Leave a Reply

comments

Related Articles

error: