ಕ್ರೀಡೆದೇಶಪ್ರಮುಖ ಸುದ್ದಿ

ಕೊರೊನಾ ಸೋಂಕಿಗೆ ಮಾಜಿ ಕ್ರಿಕೆಟಿಗ ಆರ್.ಪಿ.ಸಿಂಗ್ ತಂದೆ ಬಲಿ

ಲಕ್ನೋ,ಮೇ 12-ಟೀಂ ಇಂಡಿಯಾದ ಮಾಜಿ ವೇಗಿ ರುದ್ರಪ್ರತಾಪ್ ಸಿಂಗ್ ಅವರ ತಂದೆ ಶಿವಪ್ರಸಾದ್ ಸಿಂಗ್ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಈ ವಿಚಾರವನ್ನು ಸ್ವತಃ ಆರ್.ಪಿ.ಸಿಂಗ್ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದು ಅತ್ಯಂತ ದುಃಖದ ವಿಷಯ. ದುಃಖದಿಂದ ನನ್ನ ತಂದೆ ಶಿವಪ್ರಸಾದ್ ಸಿಂಗ್ ಅವರ ನಿಧನದ ಸುದ್ದಿಯನ್ನು ತಿಳಿಸುತ್ತಿದ್ದೇನೆ. ಕೋವಿಡ್ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಕೋವಿಡ್ 19 ಸೋಂಕಿಗೆ ಹಲವು ಕ್ರಿಕೆಟಿಗರ ಕುಟುಂಬಿಕರು ಮೃತಪಡುತ್ತಿದ್ದಾರೆ. ಕಳೆದ ಸೋಮವಾರವಷ್ಟೇ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ತಂದೆ ಪ್ರಮೋದ್ ಅವರು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದರು. ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಮತ್ತು ಸಹೋದರಿ ವಾರದ ಅಂತರದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದರು.

ಟೀಂ ಇಂಡಿಯಾದಲ್ಲಿ ಎಡಗೈ ವೇಗಿಯಾಗಿ ಮಿಂಚಿದ್ದ ಆರ್.ಪಿ.ಸಿಂಗ್ 14 ಟೆಸ್ಟ್, 58 ಏಕದಿನ ಮತ್ತು 10 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್ ಕೂಟದಲ್ಲಿ ಆರ್.ಪಿ.ಸಿಂಗ್ ಅವರು ಭಾರತ ತಂಡದ ಪ್ರಮುಖ ಬೌಲರ್ ಆಗಿದ್ದರು. 2018ರಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ರುದ್ರ ಪ್ರತಾಪ್ ಸಿಂಗ್ ಸದ್ಯ ಕಮೆಂಟೇಟರ್ ಆಗಿ ಮಿಂಚುತ್ತಿದ್ದಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: