Uncategorized

ಲಸಿಕೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿ ಕೇಂದ್ರ, ರಾಜ್ಯ ಸರ್ಕಾರಗಳು ಜನರಿಗೆ ದ್ರೋಹವೆಸಗಿವೆ: ಸಿದ್ದರಾಮಯ್ಯ

ಬೆಂಗಳೂರು,ಮೇ 13-ಲಸಿಕೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ದ್ರೋಹವೆಸಗಿವೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.

ನಿನ್ನೆ ಕರ್ನಾಟಕ ಬಿಜೆಪಿ ಘಟಕ ನಿರಾಂತಕವಾಗಿ ನಡೆಯುತ್ತಿದ್ದ ಲಸಿಕೆ ಅಭಿಯಾನಕ್ಕೆ ಹುಳಿ ಹಿಂಡಿದ್ದೇ ಕಾಂಗ್ರೆಸ್ ಎಂದು ಆರೋಪಿಸಿ ಜನರ ಮನಸಿನಲ್ಲಿ ಹುಳಿ ಹಿಂಡಿದ #ಬುರುಡೆರಾಮಯ್ಯ, ಸಮಾಜದಲ್ಲಿ ಅನುಮಾನದ ಹಾವು ಬಿಟ್ಟರು. ಜನರಿಗೆ ಆತ್ಮ ಸ್ಥೈರ್ಯ ತುಂಬುವ ಒಂದು ಕೆಲಸವನ್ನಾದರೂ ಕರ್ನಾಟಕ ಕಾಂಗ್ರೆಸ್ ಮಾಡಿದೆಯೇ? ಎಂದು ಟ್ವೀಟ್ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸುವಂತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಲಸಿಕೆ ಲಭ್ಯ ಇಲ್ಲ ಎಂದಾದರೆ ಎಲ್ಲರಿಗೂ ಹಾಕುವುದಾಗಿ ಏಕೆ ಹೇಳಬೇಕಿತ್ತು? ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವ ಅಗತ್ಯವಾದರೂ ಏನಿತ್ತು ಮುಖ್ಯಮಂತ್ರಿಗಳೇ? ಲಸಿಕೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ದ್ರೋಹವೆಸಗಿವೆ ಎಂದಿದ್ದಾರೆ.

18 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕುವುದಾಗಿ ಪ್ರಧಾನಿ ಮೋದಿ ಅವರು ಘೋಷಣೆ ಮಾಡಿದರು. ಆದರೆ, 45, 60 ವರ್ಷ ಮೀರಿದವರಿಗೇ ಇನ್ನೂ ಲಸಿಕೆ ಸಿಗುತ್ತಿಲ್ಲ. ಮೊದಲ ಡೋಸ್ ಪಡೆದವರೇ ಎರಡನೇ ಡೋಸ್‍ಗೆ ಪರದಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಬಿಎಸ್ವೈ ಅವರು ಮೇ ಒಂದರಂದು ಲಸಿಕೆ ಅಭಿಯಾನ ಉದ್ಘಾಟಿಸಿದರು. ಆಗ ವ್ಯಾಕ್ಸಿನ್ ಎಲ್ಲಿತ್ತು? ಮುಖ್ಯಕಾರ್ಯದರ್ಶಿಗಳು ಮೇ 3 ಅಥವಾ 4ನೇ ವಾರದಲ್ಲಿ ಲಸಿಕೆ ಬರುತ್ತದೆ ಎಂದಿದ್ದಾರೆ. ಆರೋಗ್ಯ ಸಚಿವರು 15 ದಿನ ಲಸಿಕೆ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಇದನ್ನು ಜವಾಬ್ದಾರಿಯುತ ಸರ್ಕಾರ ಎಂದು ಕರೆಯಲು ಆಗುವುದೇ? ಎಂದು ಪ್ರಶ್ನಿಸಿದ್ದಾರೆ.

ಜನರು ಲಸಿಕೆಗಾಗಿ ಸರತಿ ಸಾಲಿನಲ್ಲಿ ದಿನಗಟ್ಟಲೇ ಕಾಯುತ್ತಿದ್ದಾರೆ. ಮತ್ತೊಂದೆಡೆ ಆಕ್ಸಿಜನ್ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2ನೇ ಅಲೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಜ್ಞರು ವರದಿ ನೀಡಿದ್ದರು. ಆದರೆ ಆ ವರದಿಯನ್ನು ಉಭಯ ಸರ್ಕಾರಗಳು ನಿರ್ಲಕ್ಷಿಸಿದ ಪರಿಣಾಮವಾಗಿ ಕೆಟ್ಟ ಪರಿಸ್ಥಿತಿ ಎದುರಿಸುವಂತಾಗಿದೆ.

ರಾಜ್ಯದಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಆದರೆ, ಕಟ್ಟುನಿಟ್ಟಾಗಿ ಮಾಡಿಲ್ಲ. ವಲಸೆ ಹೋಗಿರುವ ಕಾರ್ಮಿಕರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಅವರು ಬದುಕುವುದಾದರೂ ಹೇಗೆ? ಬಡಜನರ ಜೀವ ಉಳಿಯಬೇಕು ಎಂದರೆ ಕೂಡಲೇ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದಿದ್ದಾರೆ.

18ವರ್ಷ ಮೀರಿದವರು ರಾಜ್ಯದಲ್ಲಿ 3.26 ಕೋಟಿ ಜನ ಇದ್ದಾರೆ. ಅವರಿಗೆ ಆರೂವರೆ ಕೋಟಿ ಡೋಸ್ ಲಸಿಕೆ ಬೇಕು. 2-3 ತಿಂಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್ ನೀಡಿದಾಗ ಮಾತ್ರ ಈ ರೋಗ ತಡೆಯಲು ಸಾಧ್ಯ. 3ನೇ ಅಲೆ ಬಾಧಿಸುವ ಮುನ್ನ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಲಸಿಕೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: