ಕ್ರೀಡೆಪ್ರಮುಖ ಸುದ್ದಿ

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಟೀಂ ಇಂಡಿಯಾ

ದುಬೈ,ಮೇ 13-ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಗ್ರಮಾನ್ಯ ತಂಡವಾಗಿ ಮುಂದುವರಿದಿದೆ.

ಐಸಿಸಿ ತಂಡಗಳ ರ್ಯಾಂಕಿಂಗ್ ನ ವಾರ್ಷಿಕ ಪರಿಷ್ಕರಣೆಯ ನಂತರ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ಒಟ್ಟು 24 ಪಂದ್ಯಗಳಿಂದ 2,014 ಪಾಯಿಂಟ್‌ ಕಲೆಹಾಕಿರುವ ಕೊಹ್ಲಿ ಬಳಗ 121ರ ರೇಟಿಂಗ್‌ನೊಡನೆ ಅಗ್ರಸ್ಥಾನದಲ್ಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಭಾರತದ ಎದುರಾಳಿಯಾಗಿರುವ ನ್ಯೂಜಿಲೆಂಡ್‌ ತಂಡ 120 ರೇಟಿಂಗ್‌ನೊಡನೆ ಎರಡನೇ ಸ್ಥಾನದಲ್ಲಿದೆ. ಕಿವೀಸ್‌ ತಂಡ 18 ಟೆಸ್ಟ್‌ಗಳಿಂದ 2,166 ಪಾಯಿಂಟ್ಸ್ ಸಂಗ್ರಹಿಸಿದೆ.

ಇಂಗ್ಲೆಂಡ್‌ (109 ರೇಟಿಂಗ್‌) ಮೂರನೇ ಸ್ಥಾನಕ್ಕೇರಿದ್ದು, ಅಲ್ಲಿ ನೆಲೆಯೂರಿದ್ದ ಆಸ್ಟ್ರೇಲಿಯಾ ತಂಡವನ್ನು (108) ನಾಲ್ಕನೇ ಸ್ಥಾನಕ್ಕೆ ಸರಿಸಿದೆ. ಪಾಕಿಸ್ತಾನ (94), ವೆಸ್ಟ್‌ ಇಂಡೀಸ್‌ (84), ದಕ್ಷಿಣ ಆಫ್ರಿಕಾ (80), ಶ್ರೀಲಂಕಾ (78), ಬಾಂಗ್ಲಾದೇಶ (46), ಜಿಂಬಾಬ್ವೆ (35) ಕ್ರಮವಾಗಿ ಐದರಿಂದ ಹತ್ತರವರೆಗಿನ ಸ್ಥಾನಗಳಲ್ಲಿವೆ. ವೆಸ್ಟ್ ಇಂಡೀಸ್‌ ಕಳೆದ ಬಾರಿ ಎಂಟನೇ ಸ್ಥಾನದಲ್ಲಿದ್ದು ಎರಡು ಮೆಟ್ಟಿಲು ಮೇಲೇರಿದೆ.

ಭಾರತ, ಜೂನ್‌ 18 ರಿಂದ 22ರವರೆಗೆ ಸೌತಾಂಪ್ಟನ್‌ನ ಏಜೀಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ. (ಏಜೆನ್ಸೀಸ್,ಎಂ.ಎನ್)

 

Leave a Reply

comments

Related Articles

error: