ಕರ್ನಾಟಕಪ್ರಮುಖ ಸುದ್ದಿ

ಕರ್ನಾಟಕಕ್ಕೆ ಕೇಂದ್ರದಿಂದ ಅತಿ ಕಡಿಮೆ ಅನುದಾನ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ಕೇಂದ್ರ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಗಳಿಗೆ ನೀಡಲಾಗುವ ಅನುದಾನದಲ್ಲಿ ಕರ್ನಾಟಕಕ್ಕೆ ಅತಿ ಕಡಿಮೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನೀತಿ ಆಯೋಗದ ಮೂರನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೂ ಸೇರಿದಂತೆ ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ ಹಂಚಿಕೆಯಾಗಿರುವ ಅನುದಾನದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತ ಉಂಟಾಗಿದೆ, ಕೃಷಿಯನ್ನೇ ಆಧರಿಸಿರುವ ಕರ್ನಾಟಕದಲ್ಲಿ ಕಳೆದ ಆರು ವರ್ಷಗಳಿಂದ ಭೀಕರ ಬರಗಾಲ ತಲೆದೋರಿದ್ದು, ರೈತರ ಸ್ಥಿತಿ ಚಿಂತಾಜನಕವಾಗಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯ ಪ್ರಕೃತಿ ವಿಕೋಪ ನಿಧಿಗೆ ಅನುದಾನ ಹಂಚಿಕೆ ಮಾಡುವಲ್ಲಿ ತೀವ್ರ ತಾರತಮ್ಯ ಮಾಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯಕ್ಕೆ ಮಂಜೂರು ಮಾಡಿರುವ ರಾಜ್ಯ ಪ್ರಕೃತಿ ವಿಕೋಪ ನಿಧಿಯು ಕೇವಲ ರು 1,375 ಕೋಟಿ. ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ಅತಿ ಕಡಿಮೆ ಅನುದಾನ. ಹಿಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ರು 7,097.89 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದ್ದು, ರು. 3,310 ಕೋಟಿ  ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಮಂಜೂರು ಮಾಡುವಾಗ ರಾಜ್ಯದ ಸಂಕಷ್ಟಕ್ಕೆ ಕೇಂದ್ರವು ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಬರದಿಂದಾಗಿ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ರು. 17,193 ಕೋಟಿ ಮೌಲ್ಯದ ಬೆಳೆ ನಷ್ಟ ಆಗಿದ್ದು, ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ ಅಡಿ ನಿಯಮಾನುಸಾರ ರು. 4,702.54 ಕೋಟಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ರಾಜ್ಯಕ್ಕೆ ಮಂಜೂರಾದ ಮೊತ್ತ ಕೇವಲ ರು. 1,685.54 ಕೋಟಿ ಎಂದು ಅವರು ವಿವರಿಸಿದರು.

Leave a Reply

comments

Related Articles

error: