ಮೈಸೂರು

ಮೈಸೂರಿನಲ್ಲಿ ಬೆಳಿಗ್ಗೆಯಿಂದಲೇ ತಂಪೆರೆಯುತ್ತಿರುವ ಮಳೆರಾಯ

ಮೈಸೂರು,ಮೇ.15:- ತೌಕ್ತೆ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ.

ಮೈಸೂರಿನಲ್ಲಿಯೂ ಬೆಳಗಿನ ಜಾವದಿಂದಲೇ ತುಂತುರು ಮಳೆ ಆರಂಭವಾಗಿದ್ದು, ಒಮ್ಮೊಮ್ಮೆ ಜೋರಾಗಿ ಅಬ್ಬರಿಸುತ್ತ ಮತ್ತೆ ತಣ್ಣಗಾಗುತ್ತಿದೆ. ಇಷ್ಟು ದಿನ ಸೆಕೆಯಿಂದ ಬೆವರಿಳಿಯುತ್ತಿದ್ದ ಜನತೆಗೆ ತಂಪು ನೀಡಿ ಅವರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿಸಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 10ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯುತ್ತಿದ್ದು, ವಾಹನಗಳ ಓಡಾಟಕ್ಕೆ   ಸಂಪೂರ್ಣ ನಿರ್ಬಂಧವಿದೆ. ಅಗತ್ಯ ವಸ್ತುಗಳನ್ನು ಒಯ್ಯವ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಳೆ ಆಗೊಮ್ಮೆ ಈಗೊಮ್ಮೆ ಜೋರಾಗಿ ಅಬ್ಬರಿಸುತ್ತ, ಒಮ್ಮೊಮ್ಮೆ ತುಂತುರು ಬೀಳುತ್ತಿದ್ದು, ಮನೆಯಲ್ಲಿಯೇ ಕುಳಿತು ಕೆಲವರು ಎಂಜಾಯ್ ಮಾಡುತ್ತಿದ್ದಾರೆ.

ಕೇರಳಕ್ಕೆ ನೈರುತ್ಯ ಮುಂಗಾರು ಮಳೆ ಮೇ.31ಕ್ಕೆ ಆಗಮಿಸುವ ಸಾಧ್ಯತೆ ಇದೆ. ಇದು ಸಾಮಾನ್ಯ ದಿನಕ್ಕಿಂತಲೂ ಒಂದು ದಿನ ಮೊದಲು ಮುಂಗಾರು ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತೌಕ್ತೆ ಚಂಡಮಾರುತ ಪರಿಣಾಮ, ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಹಾಸನ, ಚಿಕ್ಕಮಗಳೂರು,ಉತ್ತರ ಕನ್ನಡ, ಉಡುಪಿ, ಕೊಡಗು ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಅರಮನೆಯ ಮುಂಭಾಗ ಇಂದೂ ಕೂಡ ಎಂದಿನಂತೆ ನೂರಾರು ಸಂಖ್ಯೆಯಲ್ಲಿ ಪಾರಿವಾಳಗಳು ಮಳೆಯಲ್ಲಿಯೇ ಆಹಾರವನ್ನು ಅರಸುತ್ತ ಹಾರಿ ಬಂದಿದ್ದು, ಕಂಡು ಬಂತು. ಅರಮನೆ ಬಳಿ ಇರುವ ದ್ವಾರಗಳು, ಪಾರಂಪರಿಕ ಕಟ್ಟಡಗಳು ನಿಂತ  ಮಳೆ ನೀರಿನಲ್ಲಿ ಪ್ರತಿಬಿಂಬಗಳಾಗಿ ಮೂಡಿ ಬಂದವು.

ನಗರದ ಕೆಲವೆಡೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು.  ವಾಹನ ಸಂಚಾರಕ್ಕೆ ನಿರ್ಬಂಧವಿದ್ದರೂ ವಾಹನ ಚಲಾಯಿಸುತ್ತಿದ್ದವರನ್ನು ತಡೆದು ನಿಲ್ಲಿಸಿ ಪ್ರಕರಣ ದಾಖಲಿಸಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕಂಡು ಬಂತು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: