ಮೈಸೂರು

ತುಳಸಿದಾಸ್ ಆಸ್ಪತ್ರೆಯಿಂದ 17ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ : ವೈದ್ಯರಿಗೆ ಅಭಿನಂದನೆ

ಮೈಸೂರು,ಮೇ.15:- ಮೈಸೂರು ನಗರದಲ್ಲಿರುವ ಸೇತ್ ಮೋಹನದಾಸ್ ತುಳಸಿದಾಸ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಇದುವರೆಗೂ 71 ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ದಾಖಲು ಮಾಡಿಕೊಂಡು ಎಲ್ಲರಿಗೂ ಗುಣಾತ್ಮಕವಾದ ಉಚಿತ ಚಿಕಿತ್ಸೆ ನೀಡುವುದರ ಮೂಲಕ ಇದುವರೆವಿಗೂ 17ಜನರು ಕೊರೋನಾದಿಂದ ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿರುತ್ತಾರೆ.

ಅದೇ ರೀತಿ ಈ ದಿನ 7 ಮಂದಿ ಕೊರೋನಾ ಸೋಂಕಿತ ವ್ಯಕ್ತಿಗಳು ಗುಣಮುಖರಾಗಿ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಗುಣಮುಖರಾದವರನ್ನು ಆಸ್ಪತ್ರೆಯಲ್ಲಿ ನೀಡಲಾದ ಚಿಕಿತ್ಸೆಯ ಕುರಿತು ಕೇಳಿದಾಗ ಅವರು ಆಸ್ಪತ್ರೆಗೆ ಸೇರುವಾಗ ಅತ್ಯಂತ ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದು, ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ದಾದಿಯರು ನೀಡಿದ ಉತ್ತಮ ಚಿಕಿತ್ಸೆಯ ಫಲ ಹಾಗೂ ಅವರು ಅತ್ಯಂತ ವಿಶ್ವಾಸ ಸೌಜನ್ಯದಿಂದ ನೋಡಿಕೊಂಡು ನಮಗೆ ಕಾಲ ಕಾಲಕ್ಕೆ ಆತ್ಮವಿಶ್ವಾಸ ಮತ್ತು ಮನೋಸ್ಥೈರ್ಯ ತುಂಬಿದ ಕಾರಣ ನಾವು ಅತಿ ಬೇಗ ಗುಣಮುಖರಾಗಲು ಕಾರಣವೆಂದು ತಿಳಿಸಿದರು. ಬಿಸಿ ಮತ್ತು ರುಚಿಯಾದ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲಾದ ಕಾರಣ ನಾವು ಅತಿಬೇಗ ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆಯನ್ನು ಉಚಿತವಾಗಿ ನೀಡಿರುವುದರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಕಾವೇರಿ ಆಸ್ಪತ್ರೆಯ ಆಡಳಿತ ಮಂಡಳಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಕಾವೇರಿ ಆಸ್ಪತ್ರೆ ಸ್ಥಾಪಕರಾದ ಡಾ.ಜಿ.ಆರ್.ಚಂದ್ರಶೇಖರ್, ಕಾವೇರಿ ಆಸ್ಪತ್ರೆಯ ವೈದ್ಯರುಗಳಾದ ಭಾರ್ಗವ್, ಆನಂದ್ ಆರಾಧ್ಯ, ಪ್ರಾಧಿಕಾರದ ಕಾರ್ಯದರ್ಶಿ ಸವಿತ, ವಲಯ ಅಧಿಕಾರಿ ಎಸ್.ಕೆ.ಭಾಸ್ಕರ್,ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ ಮೈಸೂರಿನಲ್ಲಿ ಕೊರೋನಾ ರೋಗವು ಉತ್ತುಂಗದ ಸ್ಥಿಯಲ್ಲಿರುವಾಗ ನೀವೆಲ್ಲರೂ ಆತ್ಮಸ್ಥೈರ್ಯದಿಂದ ಅದನ್ನು ಎದುರಿಸಿ ನೀವು ರೋಗದಿಂದ ಗುಣಮುಖರಾಗಿ ಬೇರೆ ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಮಾದರಿ ವ್ಯಕ್ತಿಯಾಗಿರುತ್ತೀರಿ, ಮುಂದೆಯೂ ಸಹ ವೈದ್ಯರು ಸೂಚಿಸಿರುವ ರೀತಿ ಮನೆಯಲ್ಲಿಯೇ ಇತರೆ ಸದಸ್ಯರಿಂದ ಅಂತರ ಕಾಯ್ದುಕೊಂಡು ಉತ್ತಮ ಆಹಾರ ಮತ್ತು ಔಷಧಿಗಳನ್ನು ತೆಗೆದುಕೊಂಡು ಶೀಘ್ರ ತಮ್ಮ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಬೇಕೆಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಕೋವಿಡ್ ಮಿತ್ರ ಸ್ವಯಂ ಸೇವಕರು ಸಂತೋಷ ಹಂಚಿಕೊಂಡರು.

Leave a Reply

comments

Related Articles

error: