ದೇಶಪ್ರಮುಖ ಸುದ್ದಿ
ಕೇರಳ : ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆ ; ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್ ಡೌನ್ ಜಾರಿ
ದೇಶ(ತಿರುವನಂತಪುರಂ)ಮೇ.17:- ಕೋವಿಡ್ -19 ಪ್ರಕರಣಗಳು ನಿರಂತರ ಹೆಚ್ಚುತ್ತಿರುವುದರಿಂದ ಕೇರಳ ಸರ್ಕಾರ ಮೇ 16 ರ ಮಧ್ಯರಾತ್ರಿಯಿಂದ ಮೇ 23 ರ ಮಧ್ಯರಾತ್ರಿಯವರೆಗೆ ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್ ಡೌನ್ ಘೋಷಿಸಿದೆ.
ಕೊರೋನಾ ವೈರಸ್ ಹರಡುವುದನ್ನು ಕಡಿಮೆ ಮಾಡಲು ತಿರುವನಂತಪುರಂ, ಎರ್ನಾಕುಲಂ, ತ್ರಿಶೂರ್ ಮತ್ತು ಮಲಪ್ಪುರಂ ಗಡಿಗಳಿಗೆ ಸೀಲ್ ಡೌನ್ ಮಾಡಲಾಗಿದೆ. ಪ್ರಸ್ತುತ ಲಾಕ್ಡೌನ್ ರಾಜ್ಯದ ಇತರ 10 ಜಿಲ್ಲೆಗಳಲ್ಲಿ ಮುಂದುವರಿಯಲಿದೆ.
ತಿರುವನಂತಪುರಂ ಜಿಲ್ಲಾಡಳಿತ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಹಣ್ಣು, ತರಕಾರಿ, ಆಹಾರ, ದಿನಸಿ ವಸ್ತುಗಳು, ಡೈರಿ ಉತ್ಪನ್ನಗಳು, ಮಾಂಸ, ಮೀನು, ಪಶು ಆಹಾರ, ಕೋಳಿ ಮತ್ತು ಪಶು ಆಹಾರ, ಬೇಕರಿ ಅಂಗಡಿಗಳು ಇಂದಿನಿಂದ ಪರ್ಯಾಯ ದಿನಗಳಲ್ಲಿ ತೆರೆಯಲಿವೆ. ಬೆಳಿಗ್ಗೆ 8 ಗಂಟೆಯ ನಂತರ ಪತ್ರಿಕೆ ಮತ್ತು ಹಾಲು ವಿತರಣಾ ಸೇವೆಗಳನ್ನು ನಿಷೇಧಿಸಲಾಗುವುದು. ಪಡಿತರ ಅಂಗಡಿ ಮತ್ತು ಹಾಲಿನ ಬೂತ್ಗೆ ಪ್ರತಿದಿನ ಸಂಜೆ 5 ರವರೆಗೆ ಅವಕಾಶವಿರುತ್ತದೆ.
ಹೋಂ ಡೆಲಿವರಿ ಸೇವೆಗಳೊಂದಿಗೆ ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ಗಳನ್ನು ಬೆಳಿಗ್ಗೆ 7 ರಿಂದ ಸಂಜೆ 7.30 ರವರೆಗೆ ತೆರೆಯಲು ಅನುಮತಿಸಲಾಗಿದೆ. ಬ್ಯಾಂಕುಗಳು, ವಿಮೆ ಮತ್ತು ಹಣಕಾಸು ಸೇವೆಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕನಿಷ್ಠ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲಿವೆ. ಸಹಕಾರಿ ಬ್ಯಾಂಕುಗಳು ಸೋಮವಾರ ಮತ್ತು ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ತೆರೆದಿರುತ್ತವೆ. ಮೆಡಿಕಲ್ ಶಾಪ್ ಗಳು, ಪೆಟ್ರೋಲ್ ಪಂಪ್ ಗಳು, ಎಟಿಎಂಗಳು, ಜೀವ ಉಳಿಸುವ ಸಲಕರಣೆಗಳ ಮಾರಾಟ ಅಂಗಡಿಗಳು, ಆಸ್ಪತ್ರೆಗಳು ಮತ್ತು ಇತರ ಕ್ಲಿನಿಕಲ್ ಸಂಸ್ಥೆಗಳು ದಿನವಿಡೀ ಕಾರ್ಯನಿರ್ವಹಿಸಲಿವೆ.
ತಮ್ಮ ಮನೆಯ ಸಮೀಪವಿರುವ ಅಂಗಡಿಗಳಿಂದ ತರಕಾರಿಗಳನ್ನು ಖರೀದಿಸಿ ಮತ್ತು ಶಾಪಿಂಗ್ ಗಾಗಿ ಹೆಚ್ಚು ದೂರ ಪ್ರಯಾಣಿಸಬೇಡಿ ಎಂದು ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ದೂರದ ಪ್ರಯಾಣ ಮಾಡುವುದನ್ನು ತಡೆಯಲಾಗುತ್ತಿದೆ. ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಎರ್ನಾಕುಲಂ ಪೊಲೀಸರು ತಿಳಿಸಿದ್ದಾರೆ, ಇದಲ್ಲದೆ ಜಿಲ್ಲೆಯಲ್ಲಿ ಎಲ್ಲಾ ಕಂಟೈನ್ ಮೆಂಟ್ ವಲಯಗಳು ಮುಚ್ಚಲ್ಪಡುತ್ತವೆ. ಕಂಟೈನ್ಮೆಂಟ್ ವಲಯದಿಂದ ನಿರ್ಗಮಿಸಲು ಯಾವುದೇ ವ್ಯಕ್ತಿಗೆ ಅನುಮತಿಸಲಾಗುವುದಿಲ್ಲ. ಡ್ರೋನ್ಗಳು ಮತ್ತು ಜಿಒ ಫೆನ್ಸಿಂಗ್ ತಂತ್ರಗಳನ್ನು ಬಳಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)