ಮೈಸೂರು

ಕೋವಿಡ್-19 ತಡೆಗೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದ ಶಾಸಕ ನಾಗೇಂದ್ರ

ಮೈಸೂರು,ಮೇ.17:- ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಕೋವಿಡ್-19 ತಡೆಗೆ ರಚಿಸಲಾದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಅಧ್ಯಕ್ಷರಾದ   ಎಲ್ ನಾಗೇಂದ್ರ ಅವರು ನಡೆಸಿದರು.

ಈ ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾನಾಗ್  , ಮಹಾಪೌರರಾದ   ರುಕ್ಮಿಣಿ ಮಾದೇಗೌಡ  , ಡಿ.ಹೆಚ್.ಓ ಡಾ.ಅಮರನಾಥ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ: ನಂಜರಾಜ್ , ವಲಯ ಆಯುಕ್ತರುಗಳು, ಅಭಿವೃದ್ದಿ ಅಧಿಕಾರಿಗಳು, ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ನಾಗರಾಜು, ಸಹಾಯಕ ಔಷಧಿ ನಿಯಂತ್ರಕರು, ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲ ಸದಸ್ಯರುಗಳು ಹಾಜರಿದ್ದು, ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಸ್ತುತ ದಿನಾಂಕದಂದು ಸೋಂಕಿತರ ವಿವರ, ಹೋಂ ಐಸೋಲೇಷನ್ ನಲ್ಲಿರುವವರ ವಿವರ, ಆಸ್ಪತ್ರೆಗೆ ದಾಖಲಾದವರ ವಿವರ, ತುರ್ತು ನಿಗಾ ಘಟಕದಲ್ಲಿರುವವರ ವಿವರಗಳನ್ನು ಪಡೆದರು. ಅದರಂತೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2041 ಜನ ಸೋಂಕಿತರಿದ್ದು, 1011 ಜನ ಹೋಂ ಐಸೋಲೇಷನ್ ನಲ್ಲಿ, 923 ಜನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಂಚಕರ್ಮ ಆಯುರ್ವೇದ ಆಸ್ಪತ್ರೆಯಲ್ಲಿ ಕೋವಿಡ್ ಮಿತ್ರ ಪ್ರಾರಂಭಿಸಲಾಗಿದೆ, ಇದರಲ್ಲಿ ಶಂಕಿತರನ್ನು ಪರೀಕ್ಷೆಗೊಳಪಡಿಸಿ ಅವರ ದೈಹಿಕ ಸಾಮರ್ಥ್ಯಕ್ಕೆ ಅನುಸಾರವಾಗಿ ಚಿಕಿತ್ಸಾ ಸಲಹೆ ನೀಡುವುದು, ಅಗತ್ಯ ಆಸ್ಪತ್ರೆಗಳಿಗೆ ಕಳಿಸುವ ವ್ಯವಸ್ಥೆ ಮಾಡುತ್ತಿರುವುದಾಗಿ ಮಾಹಿತಿ ಪಡೆದರು, ಈ ವರೆಗೆ ಒಟ್ಟಾರೆ ಚಾಮರಾಜ ಕ್ಷೇತ್ರದಲ್ಲಿ ಸುಮಾರು 23 ಜನ ಕೋವಿಡ್ನಿಂದಾಗಿ ಮರಣ ಹೊಂದಿದ್ದು, 89903 ಜನರಿಗೆ ಲಸಿಕೆ ಹಾಕಿರುವ ಮಾಹಿತಿ ಪಡೆದರು.

ಎಲ್ಲ ಮಾಹಿತಿಯನ್ನು ಪಡೆದು ನಂತರ ಮಾತನಾಡಿದ ಶಾಸಕರು, ಮೈಸೂರು ಮೆಡಿಕಲ್ ಕಾಲೇಜು ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವ್ಯಾಸಂಗ್ ಮಾಡುತ್ತಿರುವ ಸ್ನಾತಕೋತ್ತರ ವಿಧ್ಯಾರ್ಥಿಗಳಲ್ಲಿ ಕೆಲವೇ ವಿಭಾಗದ ವಿದ್ಯಾರ್ಥಿಗಳನ್ನು ಮಾತ್ರ ಟ್ರಾಮಾ ಸೆಂಟರ್ ಗೆ ಸುಮಾರು 21 ದಿವಸಗಳ ರೆಡ್ ಏರಿಯಾ ವಾರ್ಡ್ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು, ಇದರಿಂದಾಗಿ ತೀವ್ರ ದೈಹಿಕ ಒತ್ತಡ ಅನುಭವಿಸುತ್ತಿರುವ ಇವರು ವ್ಯಾಸಂಗ ಮಾಡಲು ಅವಕಾಶವಿಲ್ಲದೇ ತೊಂದರೆ ಅನುಭವಿಸುವತ್ತಿದ್ದು. ಇನ್ನುಳಿದ ಹಲವಾರು ವಿಭಾಗದ ವಿಧ್ಯಾರ್ಥಿಗಳನ್ನು ಕೇವಲ ಸ್ವ್ಯಾಬ್ ಟೆಸ್ಟಿಂಗ್ ಎಂಟ್ರಿಗೆ ನಿಯೋಜಿಸಿದ್ದು, ಕೆಲವೇ ಸಂಖ್ಯೆಯ ವೈದ್ಯಕೀಯ ವಿದ್ಯಾರ್ಥಿಗಳಿಂದ ಒತ್ತಡದ ಸೇವೆ ಪಡೆಯುವ ಬದಲಾಗಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳನ್ನೂ ಸಮನಾಗಿ ಕರ್ತವ್ಯಕ್ಕೆ ನಿಯೋಜನೆ ಮಾಡಿ ಮರು ಆದೇಶ ಹೊರಡಿಸುವಂತೆ ಎಂ.ಎಂ.ಸಿ ಡೀನ್ ಆವರಿಗೆ ಸೂಚನೆ ನೀಡಿದರು.

ಮಹಾನ್ ರಡಿಯಲ್ಲಿ ನೋಂದಣಿಯಾಗದ ಸುಮಾರು 104 ಚಿಕ್ಕ ಆಸ್ಪತ್ರೆಗಳಿದ್ದು ಈ ಆಸ್ಪತ್ರೆಗಳಲ್ಲಿ ಯಾವುದೇ ವ್ಯವಸ್ಥೆಗಳಿಲ್ಲದಿದ್ದರೂ ಕೋವಿಡ್ ಚಿಕಿತ್ಸೆಗೆಂದು ಸೋಂಕಿತರನ್ನು ದಾಖಲಿಸಿಕೊಂಡು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದು ರೋಗವು ಉಲ್ಬಣಗೊಂಡಲ್ಲಿ ಆಕ್ಸಿಜನ್ – ವೆಂಟಿಲೇಟರ್ ಅಗತ್ಯವಾಗಿ ರೆಮ್ಡಿಸಿವರ್ ಔಷಧಿಯ ಅವಶ್ಯಕತೆ ಬಂದಾಗ ಮಹಾನ್ ವ್ಯಾಪ್ತಿಗೆ ಒಳಪಡದಿರುವುದರಿಂದ ಈ ಆಸ್ಪತ್ರೆಗಳಿಗೆ ಸರಬರಾಜು ಇಲ್ಲದ ಕಾರಣ ಸೋಂಕಿತ ವ್ಯಕ್ತಿಗಳು ತೀವ್ರ ಅನಾರೋಗ್ಯ ಪೀಡಿತರಾಗಿ ಮರಣಹೊಂದುತ್ತಿರುವ ಪ್ರಕರಣಗಳೇ ಹೆಚ್ಚಾಗಿದ್ದು ಈ ಕುರಿತಂತೆ ಡಿ.ಹೆಚ್.ಓ ರವರು ಈ ಕೂಡಲೇ ಸಂಬಂಧಿಸಿದ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿ ಕೋವಿಡ್ ಸೋಂಕಿನ ಚಿಕಿತ್ಸೆಯನ್ನು ನೀಡದಂತೆ ಸೂಚಿಸಬೇಕು ಇಲ್ಲವಾದಲ್ಲಿ ಈ ಆಸ್ಪತ್ರೆಗಳನ್ನು ಎಂಪಾನೆಲ್ ಮಾಡಿಕೊಂಡು ಆಕ್ಸಿಜನ್ ಸರಬರಾಜು ರೆಮ್ಡಿಸಿವಿರ್ ಔಷಧಿಯನ್ನು ಸರಬರಾಜು ಮಾಡಲು ಒಂದು ವಾರದೊಳಗಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಸೋಂಕು ಧೃಡಪಟ್ಟ ಎಲ್ಲಾ ರೋಗಿಗಳ ಮನೆಮನೆಗೆ ತೆರಳಿ ಔಷಧೋಪಚಾರದ ಕಿಟ್ ಗಳನ್ನು ವಿತರಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು, ಪ್ರತಿ ವಾರ್ಡ್ ಗೆ ರೂ.5.00 ಲಕ್ಷದಂತೆ ಕೋವಿಡ್ ನಿರ್ವಹಣೆ ಹತೋಟಿಗಾಗಿ ನೀಡಲಿರುವ ಅನುದಾನವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ಪ್ರತಿ ವಾರ್ಡ್ ಗಳಲ್ಲಿ ಅದರಲ್ಲೂ ಸ್ಲಂ ಪ್ರದೇಶಗಳಲ್ಲಿ ಕೂಡಲೇ ಸ್ಯಾನಿಟೈಜೇಷನ್, ಫಾಗಿಂಗ್ ಮಾಡಲು ಕ್ರಮಕೈಗೊಳ್ಳಬೇಕೆಂದು ಕೋರಿದರು. ಪ್ರಸ್ತುತ ಯಾವುದೇ ಕೋವಿಡ್ ಸೋಂಕಿತ ರೋಗಿಯು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿ ಅಂತಹ ರೋಗಿಗೆ ಆಕ್ಷಿಜನ್ – ವೆಂಟಿಲೇಟರ್ ಸಮಸ್ಯೆ ಎದುರಾದಲ್ಲಿ ರೋಗಿಯ ಸಂಬಂಧಿಕರಿಗೆ ಸೌಲಭ್ಯವಿರುವ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿಕೊಳ್ಳಲು ಸೂಚನೆ ನೀಡುತ್ತಿದ್ದು, ಇದರಿಂದಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಯಾವುದೇ ಆಸ್ಪತ್ರೆಯ ವೈದ್ಯರು ರೋಗಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ವಾರ್ ರೂಂಗೆ ಮಾಹಿತಿ ನೀಡಿ ರೋಗಿಯನ್ನು ಅಗತ್ಯ ಸೌಲಭ್ಯವಿರುವ ಕಡೆಗೆ ಸ್ಥಳಾಂತರಿಸಲು ಬೆಡ್ ಬ್ಲಾಕ್ ಮಾಡಿಸಿ ಸೂಕ್ತ ವ್ಯವಸ್ಥೆ ಮಾಡಲು ಕ್ರಮವಹಿಸುವಂತೆ ಸೂಚಿಸಿದರು.

ಮೇಲ್ಕಂಡ ಎಲ್ಲಾ ವಿಷಯಗಳ ಕುರಿತಂತೆ ಸುದೀರ್ಘವಾಗಿ ಚರ್ಚಿಸಿ, ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸಿದ ಸಭೆಯನ್ನು ಮುಕ್ತಾಯಗೊಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: