ಮೈಸೂರು

ಹೋರಾಟ ಅವ್ಯವಸ್ಥೆಯ ವಿರುದ್ಧವೇ ಹೊರತು ಆಡಳಿತ ಮಂಡಳಿಯ ವಿರುದ್ಧವಲ್ಲ : ದಲಿತ ವಿದ್ಯಾರ್ಥಿ ಒಕ್ಕೂಟ ಸ್ಪಷ್ಟನೆ

ಮೈಸೂರು ವಿವಿಯ ಆಡಳಿತ ನೀತಿ ನಿಯಮಗಳು ವಿದ್ಯಾರ್ಥಿಗಳ ವಿರುದ್ಧವಾದಾಗ ಖಂಡಿಸುವುದು ಅನಿವಾರ್ಯವಾಗುವುದೇ ವಿನಃ ನಮ್ಮ ಹೋರಾಟಗಳು ವ್ಯಕ್ತಿ ಹಿತಕ್ಕಾಗಿ  ಅಲ್ಲ ಎಂದು ವಿವಿಯ ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷ ಮಹೇಶ್ ಸೋಸ್ಲೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಳೆದ ಏ.22ರಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ಸುದ್ದಿಗೋಷ್ಠಿ ನಡೆಸಿ ಮೈಸೂರು ವಿವಿಯ ವಿದ್ಯಾರ್ಥಿಗಳು ಪದೇ ಪದೇ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ತರವಲ್ಲ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆಡಳಿತದ ವಿಚಾರದಲ್ಲಿ ಮೂಗು ತೂರಿಸದೇ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಿ ಎಂದು ಹೇಳಿರುವ ವಿವಾದಾತ್ಮಕ ಹೇಳಿಕೆ ಸಮಂಜಸವಲ್ಲ. ಅದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ದಲಿತ ವಿದ್ಯಾರ್ಥಿಗಳ ಹೋರಾಟ ಯಾವುದೇ ಜಾತಿ ವಿರುದ್ಧವಲ್ಲ. ವಿವಿಯ ಕಾರ್ಯವೈಖರಿಯ ವಿರುದ್ಧ ಎಂದು ಹೇಳಿ, ಮೂಲಭೂತ ಸೌಲಭ್ಯ ಈಡೇರಿಕೆಗಾಗಿಯೇ ಪ್ರತಿಭಟನೆ ನಡೆಸುವ ಅನಿವಾರ್ಯ ವಿಶ್ವವಿದ್ಯಾಲಯದಲ್ಲಿ ಮೂಡಿದ್ದು ಹೊರ ಜಗತ್ತಿಗೆ ಇದರ ಪರಿವೆಯೇ ಇಲ್ಲ ಎಂದರು. ಕುಲಸಚಿವ ಪ್ರೊ. ರಾಜಣ್ಣ ದಲಿತರಾಗಿದ್ದರೂ  ದಲಿತ ವಿದ್ಯಾರ್ಥಿಗಳ ಹಿತಕಾಯದೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅವರ ಹಗರಣ ಅವ್ಯವಹಾರಗಳನ್ನು ಖಂಡಿಸಿ ಪ್ರತಿಭಟಿಸುವ ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ವಿದ್ಯಾರ್ಥಿ ಹೋರಾಟಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ. ಆಡಳಿತ ಮಂಡಳಿಯ ಅವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದ್ದಕ್ಕೆ ನನ್ನ ವಿರುದ್ಧವೇ ಲಕ್ಷ್ಮೀಪುರಂ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ರಾಜ್ಯಪಾಲರು ಕುಲಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಅಧ್ಯಕ್ಷ ನಟರಾಜು ಶಿವಣ್ಣ ಮಾತನಾಡಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ವಿನಾ ಕಾರಣ ಸುಳ್ಳು ಆರೋಪಗಳನ್ನು ಹೊರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿರುವ ಕುಲಸಚಿವ ಪ್ರೊ.ರಾಜಣ್ಣ ಒಬ್ಬ ದಲಿತ ವಿರೋಧಿ. ಆದ್ದರಿಂದ ಅವರನ್ನು ಅಮಾನತುಗೊಳಿಸಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಒಕ್ಕೂಟದ ಮಾಧ್ಯಮ ಸಲಹೆಗಾರ ಪವನ್, ಸಂಶೋಧನಾ ವಿದ್ಯಾರ್ಥಿ ಗೋಪಾಲ್ ಹಾಜರಿದ್ದರು.(ಕೆ.ಎಂ.ಆರ್-ಎಲ್.ಜಿ)

Leave a Reply

comments

Related Articles

error: