ಮೈಸೂರು

ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ವಿರೋಧ : ಕೆ.ಎಸ್.ಈಶ್ವರಪ್ಪನವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ವಿರುದ್ದ ಬಹಿರಂಗವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣವೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಎಸ್.ಸಿ.ಮೋರ್ಚಾ ರಾಜ್ಯ ಸಮಿತಿ ಸದಸ್ಯ ಕೂಡ್ಲೂರು ಆರ್.ಶ್ರೀಧರಮೂರ್ತಿ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.

ಸೋಮವಾರ ಮೈಸೂರಿನ  ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈಶ್ವರಪ್ಪನವರು ಇತ್ತೀಚೆಗೆ ಜರುಗಿದ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಪ್ರಚಾರದ ವೇಳೆ ಬಿ.ಎಸ್.ಯಡಿಯೂರಪ್ಪ ಅವರೇ ರಾಜ್ಯದ ಮುಂದಿನ ಮುಖ್ಯಮಂತ್ರಿಗಳು ಎಂದು ವೇದಿಕೆಯ ಮೇಲೆ ಹಾಡಿ ಹೊಗಳಿ, ಮತ್ತೆ ಕೆಲವೇ ದಿನಗಳಲ್ಲಿ ಅವರ ವಿರುದ್ಧ ಹರಿಹಾಯ್ದಿರುವುದು ಖಂಡನೀಯ. ಬಿ ಎಸ್ ವೈ ಅವರನ್ನು ಪಕ್ಷದ ಉನ್ನತ ಸ್ಥಾನದಿಂದ ಕೆಳಗಿಳಿಸಿ ಬಿಜೆಪಿಯನ್ನು ರಕ್ಷಿಸಿ ಎನ್ನುವ ಅವಹೇಳನಕಾರಿ ಹೇಳಿಕೆ ಅವರಿಗೆ ಬುದ್ದಿ ಭ್ರಮಣೆಯಾಗಿದೆ ಎನ್ನುವುದನ್ನು ಸಾಬೀತು ಪಡಿಸುತ್ತಿದೆ. ಈಶ್ವರಪ್ಪನವರ ನಡೆಯಿಂದಾಗಿ ಪಕ್ಷ ಪದೇ ಪದೇ ಮುಜುಗರಕ್ಕೀಡಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿಯೇ ನಾಲ್ಕನೇ ಸ್ಥಾನಕ್ಕಿಳಿದಿದ್ದು ಅವರ ಕಾರ್ಯ ವೈಖರಿಗೆ ಜನರು ನೀಡಿದ ಮನ್ನಣೆಯಾಗಿದೆ.  ಯಡಿಯೂರಪ್ಪನವರು ಕಟ್ಟಿ ಬೆಳೆಸಿದ ಬಿಜೆಪಿಯಲ್ಲಿಯೇ ಎಲ್ಲಾ ಉನ್ನತ ಸ್ಥಾನಗಳನ್ನು ಅನುಭವಿಸಿ ಈಗ ಅವರ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿರುವುದು ಅಕ್ಷಮ್ಯ ಎಂದ ಅವರು,  ವಿರೋಧದ ನಡುವೆಯೂ ರಾಯಣ್ಣ ಬ್ರಿಗೇಡ್ ಕಟ್ಟುವ ಮೂಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದರು.  ಈಶ್ವರಪ್ಪ ಪಕ್ಷದಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದ್ದು ಅವರ ವಿರುದ್ಧ ಪಕ್ಷದ ವರಿಷ್ಠರು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಾಂತ ಪ್ರವಾಸ ಮಾಡಿ ಈಶ್ವರಪ್ಪನವರನ್ನು ಉಚ್ಛಾಟಿಸುವವರೆಗೂ ಹೋರಾಟ ನಡೆಸಬೇಕಾಗುವುದು ಎಂದು ಒತ್ತಾಯ ಪೂರ್ವಕವಾಗಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಜಿ.ಸಿದ್ದಪ್ಪ ಹಾಗೂ ಮುಖಂಡ ರಂಗಸ್ವಾಮಿ ಹಾಜರಿದ್ದರು.  (ಕೆ.ಎಂ.ಆರ್-ಎಸ.ಎಚ್)

Leave a Reply

comments

Related Articles

error: