ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಕೇಂದ್ರ ಸರ್ಕಾರ ಶೀಘ್ರವೇ ಜಲನೀತಿಯನ್ನು ರೂಪಿಸಲಿ: ನಾಡೋಜ ಚನ್ನವೀರ ಕಣವಿ; ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ

chamundi-hill-webಕೇಂದ್ರ ಸರ್ಕಾರ ರಾಷ್ಟ್ರೀಯ ಜಲನೀತಿಯನ್ನು ಶೀಘ್ರದಲ್ಲಿಯೇ ರೂಪಿಸುವ ಅಗತ್ಯವಿದೆ ಎಂದು ನಾಡೋಜ ಚೆನ್ನವೀರ ಕಣವಿಯವರು ಹೇಳಿದ್ದಾರೆ.

ಹನ್ನೊಂದು ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿರುವ  ಐತಿಹಾಸಿಕ ದಸರಾ ಉತ್ಸವಕ್ಕೆ ಚಾಮುಂಡಿಬೆಟ್ಟದಲ್ಲಿ ಶನಿವಾರ ಧನುರ್ ಲಗ್ನದ ಮೂಹೂರ್ತದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನಡೆಸಿ, ದೀಪ ಬೆಳಗಿಸುವ ಮೂಲಕ ನಾಡೋಜ ಚೆನ್ನವೀರ ಕಣವಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ನಾಡಹಬ್ಬ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಮಹಾದಾಯಿ ಕಳಸಾಬಂಡೂರಿ ನಾಲಾ ಜೋಡಣೆಗೆ ಸಂಬಂಧಪಟ್ಟ ಹೋರಾಟವಂತೂ ನಿರಂತರವಾಗಿ ಜನಾಂದೋಲನವಾಗಿ ನಡೆದಿದೆ.ನಾಡಿನಲ್ಲಿ ಅತ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದೆ. ಮಹಾದಾಯಿ ನೀರಿನ ಹಂಚಿಕೆ ವಿವಾದವನ್ನು ಮಾತುಕತೆ ಮೂಲಕ  ಬಗೆಹರಿಸಿಕೊಳ್ಳುವುದು ಸೂಕ್ತ ಎಂದರು. ಕಾವೇರಿ ಸಂದರ್ಭದಲ್ಲಿ ತಮಿಳುನಾಡು ಆಗಾಗ  ಮಗ್ಗಲು ಮುಳ್ಳಾಗಿ ಚುಚ್ಚುತ್ತಲೇ ಇರುತ್ತದೆ.ಸಂಕಷ್ಟ ಪರಿಹಾರ ಸೂತ್ರವೊಂದನ್ನು ಸದ್ಯಕ್ಕೆ ರಚಿಸಿಕೊಳ್ಳಬೇಕು. ಪ್ರಧಾನಿಯವರ ಮಧ್ಯಸ್ಥಿಕೆಗೆ ಕಾನೂನಿನಲ್ಲಿಯೂ ಅವಕಾಶವಿದೆ. ಅದಕ್ಕಾಗಿ ಪ್ರಧಾನಿಯವರು ಗಮನ ಹರಿಸಿದರೆ ಒಳ್ಳೆಯದು ಎಂದು ತಿಳಿಸಿದರು. ತಮ್ಮ ಪಕ್ಷದ ಹಿತಕ್ಕಿಂತ ರಾಜ್ಯದ ಹಿತ ಮುಖ್ಯವೆಂದು ನಮ್ಮ ರಾಷ್ಟ್ರೀಯ ಪಕ್ಷಗಳು ಭಾವಿಸಬೇಕು. ಅಂತರಾಷ್ಟ್ರೀಯ ಕಾನೂನು ಸಂಗದ 52ನೇ ಸಮಾವೇಶದಲ್ಲಿ ನೀರು ಹಂಚಿಕೆ ಕುರಿತು ಅಅಂತಾರಾಷ್ಟ್ರೀಯ ನೀತಿಯನ್ನು ರೂಪಿಸಲಾಗಿದ್ದು, ಅದರ ಆಧಾರದ ಮೇಲೆ ತಕ್ಕ ಮಾನದಂಡಗಳನ್ನು ರೂಪಿಸಿ ಅಂತಾರಾಜ್ಯ ಜಲವಿವಾದವನ್ನು ಕೇಂದ್ರ ಬಗೆಹರಿಸಬಹುದಾಗಿದೆ ಎಂದು ತಿಳಿಸಿದರು.

ಸುಸಂಸ್ಕೃತವಾಗಿರುವ ನಮ್ಮ ನಾಡಿನಲ್ಲಿ ದುರ್ಘಟನೆಗಳು ಆಗಾಗ ಸಂಭವಿಸುತ್ತಿದ್ದು, ಜನಜೀವನ ತಲ್ಲಣಗೊಂಡಿದೆ. ಅದರಿಂದ ಯುವಜನತೆ ಪ್ರಜಾಪ್ರಭುತ್ವದ ಮೌಲ್ಯಗಳಾದ ಪರಸ್ಪರ ಸಹನೆ, ಸೈರಣೆ, ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಳ್ಳಬೇಕೆಂದರು. ನಾಡಿನ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮೈಸೂರು ದಸರಾ ಹಸಿರು ದಸರಾ ಆಗಿ ಮಾರ್ಪಟ್ಟಿರುವುದು ಸಂತಸದ ವಿಷಯ. ಅನೇಕ ಬಗೆಯ ಮಾಲಿನ್ಯದ ಇಂದಿನ ಕಲುಷಿತ ವಾತಾವರಣದಲ್ಲಿ ಒಳಹೊರಗಿನ ತಾಪಮಾನವನ್ನು ತಣಿಸಲು ಜಲಸಂರಕ್ಷಣೆಯೊಂದಿಗೆ ಹಸಿರು ದಸರಾ ವರುಷದುದ್ದಕ್ಕೂ ಕಾರ್ಯರೂಪದಲ್ಲಿ ಕಂಗೊಳಿಸುವಂತಾಗಬೇಕು ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ  ಕಣವಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪೇಟ ತೊಡಿಸಿ, ಶಾಲು ಹೊದೆಸಿ, ಹಾರ ಹಾಕಿ ಫಲತಾಂಬೂಲ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ರಾದಪ್ರತಾಪ್ ಸಿಂಹ, ಧ್ರುವನಾರಾಯಣ ಸೇರಿದಂತೆ ಮೈಸೂರು, ಚಾಮರಾಜನಗರ ಶಾಸಕರು, ಮನಪಾ ಅಧಿಕಾರಿಗಳು, ಮೂಡಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: