ಮೈಸೂರು

ಕೋವಿಡ್ ನಿಯಮ ಉಲ್ಲಂಘನೆ : ಬಿ.ವೈ.ವಿಜಯೇಂದ್ರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಮನವಿ

ಮೈಸೂರು, ಮೇ 20:- ಕೋವಿಡ್ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ಎಫ್ಐಆರ್ ದಾಖಲು ಮಾಡಬೇಕು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ. ಮಂಗಳವಾರವಷ್ಟೇ ವಿಜಯೇಂದ್ರ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಈ ಕುರಿತು ಮನವಿಯನ್ನು ಸಲ್ಲಿಸಿದೆ. ವಿಜಯೇಂದ್ರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಮೇ 18ರಂದು ಕುಟುಂಬ ಸಮೇತರಾಗಿ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ವಿಶೇಷ ಪೂಜೆ ಹಾಗೂ ಹೋಮ ನಡೆಸಿದ್ದರು. ಇದು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005, ಸೆಕ್ಷನ್ 51 ಸ್ಪಷ್ಟ ಉಲ್ಲಂಘನೆಯಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ರ ಉಲ್ಲಂಘನೆ ಹಾಗೂ ಸರ್ಕಾರದ ಅಧಿಕಾರಿಗಳು ಹೊರಡಿಸುವ ಆದೇಶಕ್ಕೆ ವಿರುದ್ಧವಾದ ನಡವಳಿಕೆಯಾಗಿದೆ. ಆದ್ದರಿಂದ ಎಫ್ಐಆರ್ ದಾಖಲು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ವಿಜಯೇಂದ್ರ ದೇವಾಲಯಕ್ಕೆ ಭೇಟಿ ನೀಡಲು ಸಹಕಾರ ನೀಡಿದ ಇಲಾಖೆಗಳಿಗೆ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸರ್ಕಾರಿ ಸಿಬ್ಬಂದಿ/ ಪುರೋಹಿತ ವರ್ಗದವರನ್ನು ಕೂಡಲೇ ಅಮಾನತು ಮಾಡಿ, ಅವರುಗಳ ವಿರುದ್ಧ ಕೂಡ ಎಫ್ಐಆರ್ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಜೆ. ವಿಜಯ್ ಕುಮಾರ್ ಮನವಿ ಮಾಡಿದ್ದಾರೆ.

ದೂರು ಸ್ವೀಕರಿಸಿದ ರೋಹಿಣಿ ಸಿಂಧೂರಿ ಈ ಸಂಬಂಧ ತನಿಖೆ ನಡೆಸಿ ಕ್ರಮವಹಿಸುವಂತೆ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರಿನ ಪತ್ರದ ಮೇಲೆ ಬರವಣಿಗೆ ಮೂಲಕ ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: