ಕರ್ನಾಟಕಪ್ರಮುಖ ಸುದ್ದಿ

ಮಳೆಗಾಲದಲ್ಲಿ ಸೂಕ್ಷ್ಮ ಪ್ರದೇಶದ ಕುಟುಂಬಗಳನ್ನು ಸ್ಥಳಾಂತರಿಸಿ : ಜಿಲ್ಲಾಧಿಕಾರಿ

ರಾಜ್ಯ(ಮಡಿಕೇರಿ) ಮೇ 22 :-ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟ ಮತ್ತು ನೆಹರು ನಗರದಲ್ಲಿನ ಕಡಿದಾದ ಪ್ರದೇಶದಲ್ಲಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ತಾತ್ಕಾಲಿಕವಾಗಿ ಮಳೆಗಾಲದ ಅವಧಿಯಲ್ಲಿ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸುವಂತೆ ತಹಶೀಲ್ದಾರರು ಮತ್ತು ಪ.ಪಂ.ಇಒಗಳಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವ ಸಂಬಂಧ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ವಿರಾಜಪೇಟೆ ಪಟ್ಟಣ ಜೊತೆಗೆ ತಾಲ್ಲೂಕಿನ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರ್ತಿಸಿ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಬೇಕು. ಮುನ್ನೆಚ್ಚರಿಕೆ ಮಾಹಿತಿ ನೀಡಬೇಕು. ಅಗತ್ಯ ಇರುವ ಕಡೆ ಪರಿಹಾರ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ತಹಶೀಲ್ದಾರ ಯೋಗಾನಂದ ಅವರು ಮಾಹಿತಿ ನೀಡಿ ಅಯ್ಯಪ್ಪ ಬೆಟ್ಟ ಹಾಗೂ ನೆಹರು ನಗರದ ಒಟ್ಟು 57 ಕುಟುಂಬಗಳನ್ನು ಸ್ಥಳಾಂತರಿಸಬೇಕಿದೆ ಎಂದರು.
ತಾಲ್ಲೂಕಿನ ತೋರ ಮತ್ತಿತ್ತರ ಸೂಕ್ಷ್ಮ ಪ್ರದೇಶಗಳನ್ನು ಗುರ್ತಿಸಲಾಗಿದೆ. ಇಂತಹ ಸೂಕ್ಷ್ಮ ಪ್ರದೇಶದ ಕುಟುಂಬಗಳ ಸ್ಥಳಾಂತರ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ನಿಟ್ಟೂರು, ಬಾಳಲೆ ಮತ್ತಿತ್ತರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ವಿರಾಜಪೇಟೆ ಪಟ್ಟಣದ ವಿಜಯನಗರದಲ್ಲಿ ಇಲ್ಲಿನ 40 ಕುಟುಂಬಗಳಿಗೆ ತೊಂದರೆಯಾಗಲಿದೆ ಎಂದು ತಹಶೀಲ್ದಾರ ಮಾಹಿತಿ ನೀಡಿದರು.
ಡಿವೈಎಸ್ಪಿ ಜಯಕುಮಾರ ಅವರು ಗೊಣಿಕೊಪ್ಪದ ಕಿರುಹೊಳೆಯನ್ನು ಸರಿಪಡಿಸಬೇಕು. ಪ್ರವಾಹ ಉಂಟಾಗುವ ಪ್ರದೇಶದಲ್ಲಿ ಚರಂಡಿಯಲ್ಲಿ ಹೂಳು ತೆಗೆಯುವ ಕೆಲಸವಾಗಬೇಕಿದೆ ಎಂದರು.
ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳಾದ ಸಿ.ಶಿವಕುಮಾರ್, ಶಶಿಧರ್, ಗುರುಶಾಂತಪ್ಪ, ತಮ್ಮಯ್ಯ ಇತರರು ತಮ್ಮ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳ ಹಾಗೂ ಮುನ್ನೆಚ್ಚರಿಕೆ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ಎಇಇ ಅವರು ಹಲವು ಮಾಹಿತಿ ನೀಡಿದರು. ನಾನಾ ಇಲಾಖೆ ಅಧಿಕಾರಿಗಳು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: