ದೇಶಪ್ರಮುಖ ಸುದ್ದಿ

ಜಾರಿಗೊಳಿಸಲು ಅಸಾಧ್ಯವಾದಂತಹ ಕೋವಿಡ್ ಆದೇಶಗಳನ್ನು ನೀಡುವುದರಿಂದ ಹೈಕೋರ್ಟ್ ಗಳು ದೂರವಿರಬೇಕು: ಸುಪ್ರೀಂ ಸೂಚನೆ

ನವದೆಹಲಿ,ಮೇ 22- ಜಾರಿಗೊಳಿಸಲು ಅಸಾಧ್ಯವಾದಂತಹ ಕೋವಿಡ್ ಆದೇಶಗಳನ್ನು ನೀಡಬೇಡಿ ಎಂದು ಹೈಕೋರ್ಟ್ ಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಉತ್ತರ ಪ್ರದೇಶದಲ್ಲಿನ ಎಲ್ಲ ನರ್ಸಿಂಗ್ ಹೋಮ್‌ಗಳ ಹಾಸಿಗೆಗಳಿಗೂ ಆಕ್ಸಿಜನ್ ಸೌಲಭ್ಯವನ್ನು ಇನ್ನು ನಾಲ್ಕು ತಿಂಗಳ ಒಳಗೆ ಕಲ್ಪಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಮೊಟೊ ಪ್ರಕರಣವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್, ಅದಕ್ಕೆ ತಡೆ ನೀಡಿದ ಸಂದರ್ಭದಲ್ಲಿ ಈ ನಿರ್ದೇಶನ ನೀಡಿದೆ.

ಜಾರಿಗೊಳಿಸಲು ಅಸಾಧ್ಯವಾದಂತಹ ಆದೇಶಗಳನ್ನು ನೀಡುವುದರಿಂದ ಹೈಕೋರ್ಟ್‌ಗಳು ದೂರವಿದ್ದು, ಅನುಷ್ಠಾನಗೊಳಿಸಲು ಸಾಧ್ಯವಾಗುವಂತಹ ಆದೇಶಗಳನ್ನು ಹೊರಡಿಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ನ್ಯಾಯಪೀಠ ನಿನ್ನೆ ಹೇಳಿತು.

ಆದರೆ, ಅಲಹಾಬಾದ್ ಹೈಕೋರ್ಟ್ ಸೋಮವಾರ ನೀಡಿದ ‘ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆಯನ್ನು ಶ್ರೀರಾಮನೇ ಕಾಪಾಡಬೇಕು’ ಎಂಬ ಹೇಳಿಕೆಯನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿತು. ಅಂತಹ ಅಭಿಪ್ರಾಯಗಳನ್ನು ಸಲಹೆ ಎಂದು ಪರಿಗಣಿಸಬೇಕೆಂದು ಹೇಳಿತು.

ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಮನೇ ಕಾಪಾಡಬೇಕು ಎಂಬ ಹೇಳಿಕೆಯು ಆರೋಗ್ಯ ಕಾರ್ಯಕರ್ತರನ್ನು ನೈತಿಕವಾಗಿ ಕುಗ್ಗಿಸುತ್ತದೆ ಮತ್ತು ಆತಂಕ ಸೃಷ್ಟಿಸುತ್ತದೆ ಎಂದು ವಾದಿಸಿದ್ದರು. ಆದರೆ ಇದನ್ನು ನಿರಾಕರಿಸಿದ ಸುಪ್ರೀಂಕೋರ್ಟ್, ಜನಸಾಮಾನ್ಯರ ಕಾಳಜಿ ಮತ್ತು ಉದ್ವಿಗ್ನತೆಯನ್ನು ಗಮನಿಸಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದನ್ನು ಸರ್ಕಾರ ಅಭಿಪ್ರಾಯ ಹಾಗೂ ಸಲಹೆ ಎಂದು ಪರಿಗಣಿಸಬೇಕೇ ವಿನಾ, ನಿರ್ದೇಶನವೆಂದಲ್ಲ ಎಂದು ಹೇಳಿತು.

ಒಂದು ತಿಂಗಳ ಒಳಗೆ ಉತ್ತರ ಪ್ರದೇಶದ ಪ್ರತಿ ಹಳ್ಳಿಯಲ್ಲಿಯೂ ಐಸಿಯು ಸೌಲಭ್ಯವಿರುವ ಎರಡು ಆಂಬುಲೆನ್ಸ್‌ಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಸಹ ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: