ಮೈಸೂರು

ಹತ್ತೂರಿಗಿಂತ ಮಿಗಿಲು ಸುತ್ತೂರು ಸೇವೆ :  ಮಾಜಿ ಶಾಸಕ ಎಂ ಕೆ ಸೋಮಶೇಖರ್ ಬಣ್ಣನೆ

ಮೈಸೂರು,ಮೇ.25:- ಇಡೀ ವಿಶ್ವವೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ.ವಿವಿಧ ದೇಶಗಳು ತಮ್ಮ ಶಕ್ತಿ ಸಾಮರ್ಥ್ಯ ಮೀರಿ ತನ್ನ ಪ್ರಜೆಗಳ ಜೀವ ಉಳಿಸಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿವೆ. ಎಂದೆಂದೂ ಊಹಿಸದ ಈ ಐತಿಹಾಸಿಕ ನೋವಿನ ದಿನಗಳಿಗೆ ಕಾರಣ ಯಾರೆಂಬುದೆ ಇಡೀ ವಿಶ್ವದ ಹಲವಾರು ದೇಶಗಳ ಯಕ್ಷ ಪ್ರಶ್ನೆಯಾಗಿದೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದ್ದಾರೆ.

ಕೆಲವು ರಾಷ್ಟ್ರಗಳು ತಮ್ಮ ತಮ್ಮ ವೈಜ್ಞಾನಿಕ ಸಂಪತ್ತಿನಿಂದ ದೇಶದಲ್ಲೆಡೆ ಕೊರೊನಾದ ರಣ ಕೇಕೆಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿವೆ.   ಆದರೆ ನಮ್ಮ ದೇಶ ಪ್ರಸ್ತುತ ಎರಡನೆ ಅಲೆಯ ಹೊಡೆತಕ್ಕೆ ಸಿಲುಕಿ ಮಿಸುಕಾಡುತ್ತಿದೆ. ಒಂದೆಡೆ ದೇಶದೆಲ್ಲೆಡೆ ಸಂಪೂರ್ಣವಾಗಿ ಲಸಿಕೆ ನೀಡುವ ಕಾರ್ಯದಲ್ಲಿ ಎಡವಿದ್ದೇವೆ.ಮತ್ತೊಂದೆಡೆ ಸರಿಯಾದ ಆಸ್ಪತ್ರೆಗಳು,ಹಾಸಿಗೆಗಳು,ಆಕ್ಸಿಜನ್,ಚಿಕಿತ್ಸೆಗಳನ್ನು ನೀಡುವಲ್ಲಿಯೂ ಎಡವಿ ಲಕ್ಷಾಂತರ ಜೀವಗಳನ್ನು ಕಳೆದುಕೊಂಡಿದ್ದೇವೆ.ಇಂತಹ ಸಂಧರ್ಭದಲ್ಲಿ ಆರ್ಥಿಕವಾಗಿ ಸದೃಢವಾಗಿರುವವರು ಹಾಸಿಗೆ ಸಿಕ್ಕರೂ ಬದುಕುತ್ತಿಲ್ಲ,ಹಣ ಇಲ್ಲದಿರುವವರಿಗೆ ಕನಿಷ್ಠ ಹಾಸಿಗೆಯೂ ದೊರಕುತ್ತಿಲ್ಲ.ಇನ್ನೂ ಕೆಲವರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲೂ ಕೋಣೆಗಳು ಇಲ್ಲದ ಶೋಚನಿಯ ಸ್ಥಿತಿಯಲ್ಲಿದ್ದಾರೆ.ಆಗಿದ್ದರೆ ಸರ್ಕಾರದ ಮೇಲೆ ಬೊಟ್ಟು ಮಾಡಿ ಕೂರಬೇಕೆ? ಎಂಬುವ ಪ್ರಶ್ನೆ  ಎಲ್ಲರಿಗೂ ಕಾಣುವ ಸಾಮಾನ್ಯ ಪ್ರಶ್ನೆಯಾಗಿದೆ ಎಂದಿದ್ದಾರೆ.

ಇಡೀ ರಾಜ್ಯ ಸರ್ಕಾರ,ರಾಜ್ಯದ ಜನತೆ ನೋವುಗಳನ್ನುಂಡು ಅತ್ಯಂತ ಕಷ್ಠದ ಸಂಧರ್ಭದಲ್ಲಿರುವಾಗ ಸರ್ಕಾರದ ಪರ್ಯಾಯವಾಗಿ ಮೈಸೂರಿನ ಐತಿಹಾಸಿಕ ಪರಂಪರೆ ಎಂದೆನಿಸಿಕೊಂಡಿರುವ ಸುತ್ತೂರು ಮಠ ತನ್ನ ನೆರಳಿನ ಅಭಯವನ್ನು ನೀಡಲು ಮುಂದಾಗಿದೆ.ನಾನು ಒಬ್ಬ ಜನರ ಸೇವಕನಾಗಿ ಮಾಜಿ ಶಾಸಕನಾಗಿ ಸುತ್ತೂರು ಶ್ರೀ ಮಠಕ್ಕೆ ನಾಡಿನ ಜನತೆಯ ಪರವಾಗಿ ಅಭಾರಿಯಾಗಿದ್ದೇನೆ. ಸುತ್ತೂರು ಶ್ರೀ ಮಠದ ಸೇವೆ ಈ ನಾಡಿಗೆ ಹೊಸದೇನಲ್ಲ.ತನ್ನ ಇತಿಹಾಸದುದ್ದಕ್ಕೂ ಬಸವಣ್ಣನವರ ತತ್ವದಂತೆ ಕಾಯಕ ಮತ್ತು ದಾಸೋಹದ ಹಾದಿಯಲ್ಲಿಯೇ ಸಾಗುತ್ತಿದೆ. ಬಡಬಲ್ಲಿಗರಿಗೆ ಶೈಕ್ಷಣಿಕ ದಾಸೋಹ ನೀಡಿ, ಹಸಿದವರಿಗೆ ಅನ್ನದಾನವ ಮಾಡಿ, ಸೂರಿಲ್ಲದ ಕಂದಮ್ಮಗಳಿಗೆ ಆಶ್ರಯವ ನೀಡಿ, ಅದೆಷ್ಟೋ ಜೀವಗಳಿಗೆ ತನ್ನ ವೈದ್ಯಕೀಯ ಸೇವೆಯ ಮೂಲಕ ಪುನರ್ಜನ್ಮವನ್ನು ನೀಡಿ ,ನೂರಾರು ಬಡ ಕುಟುಂಬಗಳಿಗೆ ಸರಳ ವಿವಾಹ ಸೇವೆಯ ಮೂಲಕ ಬದುಕು ಕಟ್ಟಿಕೊಡುವ ಮೂಲಕ ತನ್ನ ಪರಂಪರೆಯುದ್ದಕ್ಕೂ ತನ್ನ ಹಿರಿಮೆ,ಗರಿಮೆ,ಶ್ರೇಷ್ಠತೆಯನ್ನು ದ್ವಿಗುಣಗೊಳಿಸಿಕೊಳ್ಳುವ ಮೂಲಕ ಒಂದು ಸಾರ್ಥಕ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ.

ರಾಷ್ಟ್ರ,ರಾಜ್ಯ ಅತ್ಯಂತ ದುಸ್ಥಿತಿಯಲ್ಲಿರುವಾಗ ತನ್ನ ಅಭೂತಪೂರ್ವ ಸೇವೆಗಳ ಮೂಲಕ ಸೇವೆ,ಮಾನವೀಯತೆಯ ಅರ್ಥವನ್ನು ನಾಡಿಗೆ ಸಾರಿದೆ. ದೇಶದಲ್ಲಿ,ರಾಜ್ಯಗಳಲ್ಲಿ ನೆರೆ ಬಂದಾಗ,ಪ್ರವಾಹ ಉಂಟಾದಾಗ,ಬರ ಬಂದಾಗ ತನ್ನ ಸೇವೆಯನ್ನು ನಿಸ್ವಾರ್ಥದಿಂದ ನೀಡುತ್ತಾ ಬಂದಿದೆ.ತಮಿಳು ನಾಡು,ಕೇರಳದ ಪ್ರವಾಹಗಳು,ಉತ್ತರ ಕರ್ನಾಟಕ ನೆರೆ,ಬರದ ಸಂಧರ್ಭದಲ್ಲಿ ಲಕ್ಷಾಂತರ ನಿರಾಶ್ರಿತರಿಗೆ ಜೀವ ನೀಡಿದೆ. ಹೀಗೆ ಪ್ರತಿ ಸಂಧರ್ಭದಲ್ಲಿ ಸರ್ಕಾರದ ಪರ್ಯಾಯವಾಗಿ ಸೇವೆಯನ್ನು ನೀಡುವ ನಾಡಿನ ಸಾಂಸ್ಕೃತಿಕ,ಧಾರ್ಮಿಕ,ಶೈಕ್ಷಣಿಕ,ವೈದ್ಯಕೀಯ ಸಂಸ್ಥೆಗಳಲ್ಲಿ ಒಂದು ಸುತ್ತೂರು ಶ್ರೀ ಮಠ.

ಪ್ರಸ್ತುತ ಇಡೀ ನಾಡಿನಲ್ಲಿ ಕೋವಿಡ್ ಎರಡನೇ ಅಲೆ ಅಬ್ಬರಿಸಿ ಲಕ್ಷಾಂತರ ಸೋಂಕಿತರು ಹಾಸಿಗೆ ಇಲ್ಲದೆ,ಚಿಕಿತ್ಸೆ ಇಲ್ಲದೆ ಪರದಾಡುತ್ತಿರುವ ಸಂಧರ್ಭದಲ್ಲಿ ತನ್ನ ಶಿಕ್ಷಣ ಕೇಂದ್ರಗಳು,ವಸತಿ ನಿಲಯಗಳು,ವಿದ್ಯಾರ್ಥಿ ನಿಲಯಗಳು,ಸಮುದಾಯ ಭವನಗಳನ್ನು ಪಾಸಿಟಿವ್ ನಂತರದ ವಿಶ್ರಾಂತಿಗಾಗಿ ಮೀಸಲಿಟ್ಟು ಸರ್ಕಾರದ ನೆರವಿಗೆ ನಿಂತಿರುವುದು ನಮ್ಮೆಲ್ಲರ ಪುಣ್ಯ.ಅದರಲ್ಲೂ ವಿಶೇಷವಾಗಿ ಸೋಂಕಿತರೆಲ್ಲರಿಗೂ ಊಟೋಪಚಾರ ನೀಡಿ,ಕೊರೊನಾ ಮಹಾಮಾರಿಗೆ ತುತ್ತಾಗಿ ಪೋಷಕರು ಬಲಿಯಾಗಿ ಮಕ್ಕಳು ಅನಾಥವಾಗಿದ್ದರೆ ಅಂಥಹ ಮಕ್ಕಳಿಗೆ ಉಚಿತ ಶಿಕ್ಷಣ,ವಸತಿ ನೀಡಲು ತೀರ್ಮಾನಿಸಿ ತೆಗೆದುಕೊಂಡಿರುವ ನಿರ್ಣಯಕ್ಕೆ ಇಡೀ ನಾಡು ತಲೆಬಾಗಿ ನಮಿಸುತ್ತದೆ.ಮಾನವೀಯತೆಯೇ ಮರೀಚಿಕೆಯಾಗಿ,ಭಾವನಾತ್ಮಕ ಸಂಬಂಧಗಳೇ ಕುಸಿಯುತ್ತಿರುವ ಈ ಕಾಲಗಟ್ಟದಲ್ಲಿ ಮಾನವೀಯತೆಯೇ ದೊಡ್ಡದು ಸೇವೆಯೇ ಪರಮ ಶ್ರೇಷ್ಠ ಎಂದು ಹಲವಾರು ಸಂಸ್ಥೆಗಳ ಸೇವಾ ಕಾರ್ಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಸುತ್ತೂರು ಶ್ರೀ ಮಠಕ್ಕೆ ನಾನೊಬ್ಬ ಭಕ್ತನಾಗಿ ಸದಾ ಚಿರರುಣಿಯಾಗಿರುತ್ತೇನೆ.ಆ ದಿಸೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಹೆಸರಾಗಿರುವ ಹತ್ತೂರಿಗಿಂತ ಸುತ್ತೂರು ಜಾತ್ರೆ ಮೇಲು ಎಂಬಂತೆ ಹತ್ತೂರಿಗಿಂತ ಸುತ್ತೂರ ಸೇವೆ ಮೇಲು ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: