Uncategorized

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ: ಮತ್ತೆ ಮುನ್ನಲೆಗೆ ಬಂದ ನಾಯಕತ್ವ ಬದಲಾವಣೆ ಚರ್ಚೆ; ದೆಹಲಿಗೆ ದೌಡಾಯಿಸಿದ ಯೋಗೇಶ್ವರ್, ಅರವಿಂದ ಬೆಲ್ಲದ

ಬೆಂಗಳೂರು,ಮೇ 26-ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಮುನ್ನಲೆಗೆ ಬಂದಿದೆ. ಈ ನಡುವೆ ಶನಿವಾರ ಸಂಜೆಯಿಂದಲೇ ಹಲವು ಪ್ರಮುಖ ಬಿಜೆಪಿ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ.

ಸೋಮವಾರ ಸಂಜೆ ದೆಹಲಿಗೆ ಬಂದಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಕರ್ನಾಟಕ ಭವನಕ್ಕೆ ಬಾರದೇ ಹೋಟೆಲ್‌ನಲ್ಲಿ ತಂಗಿದ್ದಾರೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವ ಅವರು, ರಾಜ್ಯದ ರಾಜಕೀಯ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ-ಧಾರವಾಡ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅರವಿಂದ್ ಬೆಲ್ಲದ್ ಅವರನ್ನು ಮುಂದಿನ ಬಿಜೆಪಿ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ, ಸಚಿವ ಯೋಗೇಶ್ವರ್ ಜೊತೆ ದೆಹಲಿಗೆ ತೆರಳಿರುವ ಬೆಲ್ಲದ್ ಅಲ್ಲಿ ಯಾವುದೇ ಕೇಂದ್ರ ನಾಯಕರನ್ನು ಭೇಟಿ ಮಾಡಲಿಲ್ಲ, ಆದರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಬೆಲ್ಲದ್ ಒಂದು ವೇಳೆ ಸಿಎಂ ಹುದ್ದೆ ಖಾಲಿಯಾದರೇ ಅವರೇ ಮುಂದಿನ ಆಯ್ಕೆ ಎಂದು ಹೇಳಲಾಗುತ್ತಿದೆ.

ಗಣಿ ಸಚಿವ ಮುರುಗೇಶ್ ನಿರಾಣಿ ಅವರು ದೆಹಲಿಗೆ ತೆರಳುತ್ತಾರೆ ಎಂಬ ನಿರೀಕ್ಷೆ ಇತ್ತು, ಆದರೆ ಅಂತಿಮ ಕ್ಷಣದಲ್ಲಿ ಯೋಜನೆ ಬದಲಾಗಿದೆ ಎನ್ನಲಾಗಿದೆ.

ಬಿ.ಎಸ್‌.ಯಡಿಯೂರಪ್ಪ ನಾಯಕತ್ವ ಬದಲಾವಣೆ ಆದರೆ ಮುಂದಿನ ಆಯ್ಕೆ ಯಾರು? ಎಂಬುವುದು ಕುತೂಹಲಕಾರಿ ವಿಚಾರವಾಗಿದೆ. ಸದ್ಯ ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಅಶ್ವತ್ಥ ನಾರಾಯಣ ಹೆಸರುಗಳು ಚಾಲ್ತಿಯಲ್ಲಿವೆ. ಆದರೆ ಹೈಕಮಾಂಡ್‌ ಆಯ್ಕೆ ಯಾರು ಎಂಬುವುದು ಪ್ರಮುಖ್ಯತೆ ಪಡೆದುಕೊಂಡಿದೆ.

ನಾಯಕತ್ವ ಬದಕಲಾವಣೆ ವಿಚಾರ ಮುನ್ನಲೆಗೆ ಬಂದ ಹಿನ್ನೆಲೆಯಲ್ಲಿ ಶಾಸಕಾಂಗ ಸಭೆ ಕರೆಯಲು ಕೆಲವು ಶಾಸಕರು ಆಗ್ರಹಿಸಿದ್ದಾರೆ. ಲಾಕ್‌ಡೌನ್ ಅವಧಿ ಮುಗಿದ ಬಳಿಕ ಶಾಸಕಾಂಗ ಸಭೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಸಭೆಯಲ್ಲಿ ಈ ಎಲ್ಲಾ ವಿಚಾರಗಳು ಚರ್ಚೆ ನಡೆಯಲಿದೆ. ಇದಾದ ಬಳಿಕ ನಾಯಕತ್ವ ಬದಲಾವಣೆ ಕುರಿತಾಗಿ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಬದಲಾವಣೆಗೆ ಪ್ರಮುಖ ಕಾರಣಗಳೇನು?

ಬಿ.ಎಸ್‌.ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಇಂದು ನಿನ್ನೆಯದಲ್ಲ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿಎಸ್‌ವೈ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ನಾಯಕತ್ವ ಬದಲಾವಣೆ ಚರ್ಚೆ ಶುರುವಾಗಿದೆ. ಇದಕ್ಕೆ ಕೊಡುತ್ತಿರುವ ಕಾರಣಗಳು ಹಲವು. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರದಲ್ಲಿ ಹೆಚ್ಚಿನ ಆದ್ಯತೆ ಇಲ್ಲ. ಈ ಕಾರಣಕ್ಕಾಗಿ ವಯಸ್ಸು ಆಧಾರದಲ್ಲಿ ಬದಲಾವಣೆ ಅಗತ್ಯ ಎಂಬ ವಾದವಿದೆ. ಅದರ ಜೊತೆಗೆ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದ್ದು ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗಿದೆ.

ಮತ್ತೊಂದು ಕಡೆ ಪಕ್ಷದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ ಕೂಡಾ ಕಾರಣ ಎಂಬ ವಿಚಾರ ಕೇಳಿಬರುತ್ತಿದೆ. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ, ಬೆಡ್‌ ಬ್ಲ್ಯಾಕಿಂಗ್ ದಂಧೆ, ಜಿಂದಾಲ್‌ಗೆ 3,677 ಎಕರೆ ಭೂಮಿಯನ್ನು ನೀಡಿರುವುದು ಇವೆಲ್ಲವೂ ಇದೀಗ ಸಿಎಂ ಬಿಎಸ್‌ವೈ ವಿರುದ್ಧದ ಆರೋಪ ಪಟ್ಟಿಗೆ ದಾಖಲೆಗಳಾಗಿ ನಿಂತಿವೆ.

ಅಲ್ಲದೆ, ಯಡಿಯೂರಪ್ಪ ಆಡಳಿತದಲ್ಲಿ ಹಿಡಿತವನ್ನು ಕಳೆದುಕೊಂಡಿದ್ದಾರೆ. ಎಲ್ಲವನ್ನು ಅವರ ಪುತ್ರ ವಿಜಯೇಂದ್ರ ನಿಯಂತ್ರಣ ಮಾಡುತ್ತಾರೆ ಎಂಬ ಆರೋಪವೂ ಇದೆ. ಶಾಸಕರಿಗೆ ಸಿಎಂ ಸಿಗುತ್ತಿಲ್ಲ. ಏನಾದರು ಕೆಲಸ ಆಗಬೇಕಾದರೆ ವಿಜಯೇಂದ್ರ ಅವರನ್ನೇ ಭೇಟಿ ಮಾಡಬೇಕು. ಆದರೆ ಅಲ್ಲೂ ಶಾಸಕರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂಬೆಲ್ಲಾ ಆರೋಪಗಳು ಇವೆ. ಇವೆಲ್ಲವನ್ನು ಬಿಜೆಪಿ ನಿಷ್ಠ ಶಾಸಕರು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಈ ನಡುವೆ ಜುಲೈ 27 ಕ್ಕೆ ಬಿಎಸ್‌ವೈ ಸರ್ಕಾರ ಎರಡು ವರ್ಷ ಪೂರೈಕೆ ಮಾಡಲಿದೆ. ಇದೇ ಅವಧಿಯಲ್ಲಿ ನಾಯಕತ್ವ ಬದಲಾವಣೆ ಮಾಡುವ ನಿರ್ಧಾರವನ್ನ ಹೈಕಮಾಂಡ್ ಕೈಗೊಂಡರೆ ಅಚ್ಚರಿ ಇಲ್ಲ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: