ಮೈಸೂರು

ಗೌತಮ ಬುದ್ಧನ ಪ್ರಬುದ್ಧತೆ, ಶುದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಡಾ.ಭೀಮರಾಜ್

ಬುದ್ಧ ಪೌರ್ಣಮಿಯ ಪ್ರಯುಕ್ತ ನಿರಾಶ್ರಿತರಿಗೆ ದಿನಸಿ ವಿತರಣೆ

ಮೈಸೂರು, ಮೇ 26- ನಗರದ ನಿರಂತರ ಸಾಂಸ್ಕೃತಿಕ ವೇದಿಕೆ ಹಾಗೂ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಇಂದು   ಬುದ್ಧ ಪೌರ್ಣಮಿಯ ಪ್ರಯುಕ್ತ ನಗರದ ಹೊಟೇಲ್‍ ಗಳಲ್ಲಿ ಕಾರ್ಯ ನಿರ್ವಹಿಸುವ ಹಾಗೂ ಅಸಂಘಟಿತ ವಲಯದ ಹೆಣ್ಣು ಮಕ್ಕಳ ಕುಟುಂಬವನ್ನು ಗುರುತಿಸಿ, ಅವರಿಗೆ ದಿನಸಿ ಪದಾರ್ಥಗಳೊಂದಿಗೆ, ತರಕಾರಿ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.

ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಂಸ್ಥೆಯ ಕನ್ನಡ ಸಹಾಯಕ ಪ್ರಾಧ್ಯಾಪಕರಾದ   ಡಾ.ಭೀಮರಾಜ್ ಹಿರೇಗೌಡ ಮಾತನಾಡಿ  ಇಡೀ ಜಗತ್ತಿಗೆ ಶಾಂತಿಯ ಬೆಳಕನ್ನು ಪಸರಿಸಿದ್ದು ಬುದ್ಧ, ಜ್ಞಾನದ ಜ್ಯೋತಿಯನ್ನು ಬೆಳಗಿಸಿ,ಅಜ್ಞಾನದ ಕತ್ತಲೆಯನ್ನು ತೊಲಗಿಸಿದ ಮಹಾನ್ ಚೇತನ ಗೌತಮ ಬುದ್ಧ ಎಂದರು. ಸಮಾನತೆಯ ಬದುಕನ್ನು ಬಯಸಿದ್ದ ಬುದ್ದ, ಕರುಣೆ ಮತ್ತು ಶಾಂತಿಯನ್ನು ಜೀವನದಲ್ಲಿ ಹೊಂದಬೇಕು, ವಿದ್ಯೆ ಕಡಿಮೆಯಾದರೂ ನಡತೆ ಶುದ್ಧವಾಗಿರಬೇಕು. ಹುಟ್ಟಿನಿಂದಲೇ ಜಗತ್ತಿಗೆ ಶುಭ ಸೂಚಕವನ್ನು ಹೊತ್ತು ತಂದ ಪುಣ್ಯಪುರುಷ ಗೌತಮ ಬುದ್ಧ ವಿಶ್ವಕ್ಕೇ ಪ್ರಸ್ತುತ ಎಂದ ಅವರು, ಮಹಾನ್ ವ್ಯಕ್ತಿಗಳ ದರ್ಶನವನ್ನು, ಆಶಯವನ್ನು ಅರ್ಥ ಮಾಡಿಕೊಳ್ಳಲು ಅವರ ಕೃತಿಗಳನ್ನು ಓದಿದರೆ ನಾವು ಕೂಡ ಅವರನ್ನು ಹಿಂಬಾಲಿಸಿ, ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬಹುದೆಂದು ಅಭಿಪ್ರಾಯಿಸಿದರು. ‘ಬಹುಜನ ಸುಖಾಯ, ಬಹುಜನ ಹಿತಾಯ’ ಇದು ಬುದ್ಧನ ಮಹಾವಾಕ್ಯ. ಇಡೀ ಜಗತ್ತನ್ನು ಬೆಳಕಿನತ್ತ ಕೊಂಡೊಯ್ಯಲು ತಾವು ಬದುಕಿರುವವರೆಗೂ ಬಹುಜನರ ಹಿತವನ್ನು, ಸಮಾನತೆಯನ್ನು ಕಾಪಾಡಿಕೊಂಡು ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾದರು. ಬುದ್ಧ ಎಂದರೆ ವಿಚಾರ, ಶಾಂತಿ, ಪ್ರಬುದ್ಧತೆ, ಶುದ್ಧತೆ. ಇದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಸೆಂಟ್ ಜೋಸೆಫ್ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕ ಹಾಗೂ ಲೇಖಕರಾದ ಮಹೇಶ್ ಅಗಸರಹಳ್ಳಿಯವರು ಮಾತನಾಡಿ, ಇಂದಿನ ಯುವಕರಿಗೆ ಬುದ್ಧ ಮಾದರಿಯಾಗಬೇಕು. ವಿಶ್ವಕ್ಕೆ ಜ್ಞಾನ, ಧ್ಯಾನ, ಸ್ನೇಹ, ಪ್ರೀತಿ, ಕರುಣೆ, ಮಾನವೀಯತೆ ಹಾಗೂ ಶಾಂತಿಯ ಸಂದೇಶ ಸಾರಿದ ಮಹಾನ್ ಚೇತನ ಗೌತಮ ಬುದ್ಧ ಎಂದು ತಿಳಿಸಿದರು, ಇಂದು ವಿಶ್ವಕ್ಕೆ ಹರಡಿರುವ ಮಹಾಮಾರಿ ಕೊರೊನಾ ಬಹಳ ಬೇಗ  ಮುಕ್ತವಾಗಲಿ, ಸಮಾಜದಲ್ಲಿರುವ ಜನರು ನೆಮ್ಮದಿಯಿಂದ ಬದುಕನ್ನು ನಡೆಸುವಂತಾಗಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ನಿರಂತರ ಫೌಂಡೇಶನ್‍ ನ ಖಜಾಂಚಿ ಶರತ್, ಸಮರ್ಪಣಾ ಟ್ರಸ್ಟ್ ನ ಗೌರವ ಖಜಾಂಚಿ ಹಾಗೂ ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಗೌರವ ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಹ್ಮಣ್ಯಂ ಮತ್ತಿತರರು ಉಪಸ್ಥಿತರಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ಪೌರಕಾರ್ಮಿಕರಿಗೆ ಆಹಾರದ ಪೊಟ್ಟಣ ಹಾಗೂ ಹೊಟೇಲ್‍ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: