ಮೈಸೂರು

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರ ನಿಧನಕ್ಕೆ ಸುತ್ತೂರು ಶ್ರೀ ಸಂತಾಪ

ಮೈಸೂರು,ಮೇ.27:- ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ, ಶತಾಯುಷಿ   ಹೆಚ್.ಎಸ್. ದೊರೆಸ್ವಾಮಿಯವರು  ಬೆಂಗಳೂರಿನಲ್ಲಿ ವಿಧಿವಶರಾದುದು ವಿಷಾದದ ಸಂಗತಿ ಎಂದು ಸುತ್ತೂರು ಶ್ರೀಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಪ್ರಖರ ರಾಜಕೀಯ ಚಿಂತನೆ ಹೊಂದಿದ್ದ ಮಧ್ಯಮವರ್ಗದಿಂದ ಬಂದ   ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿವರದು ಉದ್ದಕ್ಕೂ ಹೋರಾಟದ ಬದುಕು. ಸಾಹಿತ್ಯ ಮಂದಿರ ಎಂಬ ಪ್ರಕಾಶನ ಸಂಸ್ಥೆಯನ್ನೂ “ಪೌರವಾಣಿ” ಎಂಬ ಹೆಸರಿನ ವೃತ್ತಪತ್ರಿಕೆಯನ್ನು ನಡೆಸುತ್ತಿದ್ದರು. ಗಾಂಧೀಪ್ರಣೀತ ತತ್ವಗಳಾದ ಸತ್ಯ ಮತ್ತು ಅಹಿಂಸೆಗಳನ್ನು ಅವರು ಜೀವಮಾನದುದ್ದಕ್ಕೂ ಒಂದು ವ್ರತವೆಂಬಂತೆ ನಡೆಸಿಕೊಂಡು ಬಂದಿದ್ದರು. ಮಹಾತ್ಮ ಗಾಂಧೀಯವರ ಕಟ್ಟಾ ಅನುಯಾಯಿಗಳಾಗಿದ್ದ ಅವರು ಆ ಮೌಲ್ಯಗಳನ್ನು ಪರಿಪಾಲಿಸಿದ ಕೊನೆಯ ಕೊಂಡಿಯಂತಿದ್ದರು. ವಿನೋಭಾ ಭಾವೆಯವರ ಭೂದಾನ ಚಳುವಳಿಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯ ಚೇತನ. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿ ಶ್ರಮಿಕವರ್ಗದವರ ಆರಾಧ್ಯದೈವವಾಗಿದ್ದರು. ಸರ್ಕಾರ ಯಾವ ಪಕ್ಷದ್ದೇ ಇರಲಿ, ಅದರ ತಪ್ಪುಗಳನ್ನು ನಿರ್ದಾಕ್ಷಣ್ಯದಿಂದ ಖಂಡಿಸುತ್ತಿದ್ದರು. ಖ್ಯಾತ ಇತಿಹಾಸಕಾರ  ರಾಮಚಂದ್ರ ಗುಹಾರವರು ದೊರೆಸ್ವಾಮಿಯವರನ್ನು “ಈ ನಾಡಿನ ಅಂತಸಾಕ್ಷಿ” ಎಂದು ಕರೆದಿರುವುದು ಕರ್ನಾಟಕ ಒಬ್ಬ ಧೀಮಂತ ಹೋರಾಗಾರರನ್ನು ನಿಸ್ವಾರ್ಥ ಜನನಾಯಕರನ್ನು ನಿಜಕ್ಕೂ ಕಳೆದುಕೊಂಡಿದೆ.

ದಿವಂಗತರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬವರ್ಗದವರು, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಹಾರೈಸುತ್ತೇವೆ ಎಂದಿದ್ದಾರೆ. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: