ಮೈಸೂರು

ದಸರಾ ವಸ್ತುಪ್ರದರ್ಶನ ಆವರಣಕ್ಕೆ ಸ್ಥಳಾಂತರಿಸಿರುವ ಮಾರುಕಟ್ಟೆಯಲ್ಲಿ ರೈತರಿಂದ ಅಕ್ರಮ ಹಣ ವಸೂಲಿ ಆರೋಪ ಹಿನ್ನೆಲೆ : ಅಧಿಕಾರಿಗಳ ಭೇಟಿ

ಮೈಸೂರು,ಮೇ.27:-  ದಸರಾ ವಸ್ತುಪ್ರದರ್ಶನ ಆವರಣಕ್ಕೆ ಸ್ಥಳಾಂತರಿಸಿರುವ ಎಂ.ಜಿ.ಮಾರುಕಟ್ಟೆಯಲ್ಲಿ ರೈತರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‌ಕುಮಾರ್ ಗೌಡ ಹಾಗೂ ನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಅವರ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

ವ್ಯಾಪಾರ ಮಾಡುತ್ತಿದ್ದ ರೈತರನ್ನು ವಿಚಾರಿಸಿ, ನಿಮ್ಮಿಂದ ಯಾರಾದರೂ ಹಣ ಕೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಲಾಗಿದ್ದು, ನೀವು ಯಾರಿಗೂ ಭಯ ಪಡಬೇಕಿಲ್ಲ, ಧೈರ್ಯವಾಗಿ ಹೇಳಿ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಧೈರ್ಯ ತುಂಬಿದರು.

ನಗರಪಾಲಿಕೆ ಹಾಗೂ ಪ್ರಾಧಿಕಾರ ನಿಮ್ಮ ಅನುಕೂಲಕ್ಕಾಗಿ ಸ್ಥಳಾವಕಾಶ ಕಲ್ಪಿಸಿದೆ. ನೀವು ಯಾರಿಗೂ ಹಣ ಕೊಡಬೇಕಿಲ್ಲ. ಹಣಕ್ಕೆ ಯಾರಾದರೂ ಪೀಡಿಸಿದರೆ, ನಮಗೆ ದೂರು ನೀಡಿ, ಗೌಪ್ಯತೆ ಕಾಪಾಡಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೇಮಂತ್‌ ಕುಮಾರ್‌ಗೌಡ ಅವರು, ಕೋವಿಡ್ ಕಾರಣದಿಂದ ರೈತರು ಸುರಕ್ಷಿತವಾಗಿದ್ದು, ಸಾರ್ವಜನಿಕ ಅಂತರ ಕಾಯ್ದುಕೊಂಡು ವ್ಯಾಪಾರ-ವಹಿವಾಟು ನಡೆಸಲಿ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸ್ಥಳ ಕಲ್ಪಿಸಲಾಗಿದೆ. ಆದರೆ, ಇಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಮಹಾನಗರಪಾಲಿಕೆಗೆ ಶುಲ್ಕ ನೀಡಬೇಕು ಎಂದು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಮೌಖಿಕವಾಗಿ ಕೇಳಿಬಂದಿವೆ ಎಂದು ಹೇಳಿದರು.

ಪ್ರಾಧಿಕಾರವು ವಿದ್ಯುತ್‌ ಗೆ ತಿಂಗಳಿಗೆ 60ರಿಂದ 70 ಸಾವಿರ ರೂ. ಬರಿಸುತ್ತಿದೆ. ಇದರೊಂದಿಗೆ ರೈತರ ಅನುಕೂಲಕ್ಕಾಗಿ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಿದೆ. ಒಂದು ವೇಳೆ ರೈತರು ಅನ್ಯರಿಗೆ ಹಣ ನೀಡುವುದಿದ್ದಲ್ಲಿ, ಪ್ರಾಧಿಕಾರದಿಂದಲೇ ನಿಗದಿ ಶುಲ್ಕ ವಿಧಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರ ಸಿಇಒ ಗಿರೀಶ್, ಇನ್ಸಪೆಕ್ಟರ್ ಶ್ರೀಕಾಂತ್ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: