ಕರ್ನಾಟಕಪ್ರಮುಖ ಸುದ್ದಿ

ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ: 340ಕ್ಕೂ ಹೆಚ್ಚು ರೈತರ ಸಾವಿಗೆ ಕೇಂದ್ರ ಸರ್ಕಾರ ನೇರಹೊಣೆ;  ಸಿದ್ದರಾಮಯ್ಯ

ಬೆಂಗಳೂರು,ಮೇ 27-ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧದ ರೈತರ ಹೋರಾಟಕ್ಕೆ 6 ತಿಂಗಳಾಗಿದ್ದು, ಬೇಡಿಕೆಗಳನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸಿ, ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂದು ಪ್ರಧಾನಿ ಮೋದಿ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

#ರೈತರಪ್ರತಿಭಟನೆ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರತಿಭಟನೆಯ ಸ್ಥಳದಲ್ಲಿ ಸುಮಾರು 340 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಈ ಸಾವುಗಳಿಗೆ ಕೇಂದ್ರ ಸರ್ಕಾರವೇ ನೇರಹೊಣೆ. ಜಗತ್ತಿನ ಯಾವುದೇ ದೇಶದ ನಾಗರಿಕ ಸರ್ಕಾರವು ಜನರ ಬೃಹತ್ ಚಳುವಳಿಯನ್ನು ಈ ಮಟ್ಟದಲ್ಲಿ ನಿರ್ಲಕ್ಷಿಸಿದ ಇತಿಹಾಸವಿಲ್ಲ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಮರಣ ಹೊಂದಿದ ಎಲ್ಲ ರೈತರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.

ದೇಶದ ಶೇ. 80 ರಷ್ಟು ಜನರು ರೈತಾಪಿ ಕುಟುಂಬಗಳೊಂದಿಗೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಸಂಬಂಧವಿರುವವರು. ಇಷ್ಟು ಬೃಹತ್ ಜನ ಸಮುದಾಯದ ಹಕ್ಕೊತ್ತಾಯಗಳಿಗೆ ಸರ್ಕಾರ ಕುರುಡಾಗಿ, ಕಿವುಡಾಗಿ ನಡೆದುಕೊಳ್ಳುತ್ತಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ದೇಶದ ಎಲ್ಲ ರಂಗಗಳು ವಿಫಲವಾಗಿದ್ದಾಗ ಕೃಷಿಯು ರಾಜ್ಯದಲ್ಲಿ ಶೇ.6.4 ರಷ್ಟು, ದೇಶದಲ್ಲಿ 3.5 ರಷ್ಟು ಪ್ರಗತಿಯಾಗಿದೆಯೆಂದು ಸರ್ಕಾರಗಳೇ ತಮ್ಮ ವರದಿಗಳಲ್ಲಿ ಹೇಳಿಕೊಂಡಿವೆ. ಹಾಗಿದ್ದರೂ ತೊಗರಿ, ಹೆಸರು, ಸೂರ್ಯಕಾಂತಿ, ಕಡಲೆ ಕಾಯಿ ಮುಂತಾದ ಬೆಳೆಗಳಿಗೆ ಒಳ್ಳೆ ಬೆಲೆ ಏಕೆ ಸಿಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 75 ರಷ್ಟು ಹೆಚ್ಚಾಗಿದೆ. ಅಡುಗೆ ಎಣ್ಣೆಯ ಬೆಲೆ ಶೇ. 120 ಹೆಚ್ಚಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ಹಣದುಬ್ಬರದ ಪ್ರಮಾಣ ಶೇ.16 ಹೆಚ್ಚಾಗಿದೆ. ಹಾಗಿದ್ದರೆ ರೈತರು ಬೆಳೆದದ್ದೆಲ್ಲ ಎಲ್ಲಿ ಹೋಯಿತು? ಎಂದು ಪ್ರಶ್ನೆ ಮಾಡಿದ್ದಾರೆ.

ಬೇಳೆ ಕಾಳುಗಳು ಮತ್ತು ಎಣ್ಣೆ ಕಾಳುಗಳ ಪ್ರಮುಖ ವ್ಯಾಪಾರಿ ಅದಾನಿಯ ವಿಲ್ಮಾರ್ ಕಂಪೆನಿ. ದೇಶದಲ್ಲಿ ಸುಮಾರು 5 ಮಿಲಿಯನ್ ಟನ್ ತೊಗರಿ ಬೇಳೆ ಬಳಕೆ ಇದೆ. ಒಂದು ಕೆ.ಜಿ. ತೊಗರಿ ಬೇಳೆಯ ಬೆಲೆ 30 ರೂಗಳಷ್ಟು ಹೆಚ್ಚಾದರೆ ಈ ಕಂಪೆನಿಗೆ ಒಂದು ವರ್ಷಕ್ಕೆ ಒಂದೂವರೆ ಲಕ್ಷ ಕೋಟಿಯಷ್ಟು ಹೆಚ್ಚಿನ ಲಾಭವಾಗುತ್ತೆ ಎಂದಿದ್ದಾರೆ.

ತೊಗರಿಬೇಳೆಯ ಬೆಲೆ ಕಳೆದ ಕೆಲವು ತಿಂಗಳಿಂದ ಈಚೆಗೆ ಸರಾಸರಿ 100 ರೂಪಾಯಿಗಳಷ್ಟು ಹೆಚ್ಚಾಗಿದೆ. ಅನೇಕ ಕಡೆ ಕೆಜಿಗೆ 180 ರೂ.ವರೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಇದು 80-90 ರೂ. ಮಾತ್ರ ಇತ್ತು. ಪರಿಸ್ಥಿತಿ ಹೀಗೇ ಇದ್ದರೆ ರೈತರ ಉದ್ಧಾರ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ನಾನು ಈ ಹಿಂದೆ ಬರೆದ ಪತ್ರದಲ್ಲಿ ಉಲ್ಲೇಖಿಸಿದಂತೆ “ರೈತರು ನಡೆಸುತ್ತಿರುವ ಹೋರಾಟ ತಮಗಾಗಿ ಮಾತ್ರವಲ್ಲ. ರೈತರ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಿರುವ ಗ್ರಾಹಕರ ಪರವಾಗಿ ನಡೆಸುತ್ತಿರುವ ಹೋರಾಟವು ಆಗಿದೆ”. ಇದು ದೇಶ ಉಳಿಸುವ ಹೋರಾಟವು ಹೌದು ಎಂದು ಸಿದ್ದು ಟ್ವೀಟ್ ಮಾಡಿದ್ದಾರೆ.

ವಿದೇಶಿ ಆಮದನ್ನು ನಿಲ್ಲಿಸಿ, ಅದಾನಿ ಮುಂತಾದವರು ಅಕ್ರಮವಾಗಿ ಸಂಗ್ರಹಿಸಿರುವ ಎಲ್ಲ ಕೃಷಿ ಉತ್ಪನ್ನಗಳನ್ನು ವಶಪಡಿಸಿಕೊಂಡು ಮಾರುಕಟ್ಟೆಗೆ ತಂದು ಹಣದುಬ್ಬರವನ್ನು ನಿಯಂತ್ರಿಸಿ, ನ್ಯಾಯಯುತ ಬೆಲೆಗಳಿಗೆ ಮಾರುವಂತೆ ಕೇಂದ್ರ ಸರ್ಕಾರ ಮಾಡಬೇಕು ಎಂದಿದ್ದಾರೆ.

ರೈತರು ಬೆಳೆದ ಬೆಳೆಗಳಿಗೆ ಬೆಲೆ ಖಾತ್ರಿ ಕಾಯಿದೆಯನ್ನು, ಗ್ರಾಹಕರಿಗೆ ನ್ಯಾಯಯುತ ಬೆಲೆಗಳ ಖಾತ್ರಿಯ ಕಾಯಿದೆಯನ್ನು ಜಾರಿಗೊಳಿಸಬೇಕು. ಇದನ್ನು ನಿಭಾಯಿಸಲು ಸರ್ವಪಕ್ಷಗಳ, ತಜ್ಞರ, ರೈತ ಮುಖಂಡರ, ಗ್ರಾಹಕ ಪ್ರತಿನಿಧಿಗಳ ಶಾಶ್ವತ ಸಮಿತಿಯನ್ನು ರಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: