ಮೈಸೂರು

ಲಾಕ್ ಡೌನ್ ನಿಂದ ನಷ್ಟ ಪರಿಹಾರವನ್ನು ತುಂಬಿಸಿಕೊಡುವಂತೆ ಬಡಗಲಪುರ ನಾಗೇಂದ್ರ ಒತ್ತಾಯ

ಮೈಸೂರು,ಮೇ.28:- ಲಾಕ್ ಡೌನ್ ನಿಂದಾಗಿ ಕೃಷಿ ಉತ್ಪನ್ನಗಳ ನಷ್ಟದ ಬಗ್ಗೆ ವರದಿ ಮಾಡಿಸಿ ನಷ್ಟಪರಿಹಾರವನ್ನು ರೈತರಿಗೆ ತುಂಬಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಲಾಕ್ ಡೌನ್ ಕಾರಣಕ್ಕಾಗಿ ರೈತರು ಬೆಳೆದಿರುವ ಕೃಷಿ ಉತ್ಪನ್ನ ಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಕೆಲವು ಕಡೆ ಮಾರುಕಟ್ಟೆ ಇಲ್ಲದೆ ಸಂಪೂರ್ಣ ನಷ್ಟವಾಗುತ್ತಿದೆ. ಈ ಬಗ್ಗೆ ಸರ್ಕಾರ ಸಮಿತಿ ನೇಮಿಸಿ ವರದಿ ಮಾಡಬೇಕು. ನಷ್ಟ ಪರಿಹಾರವನ್ನು ರೈತರಿಗೆ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘವು ಸಂಗ್ರಹಿಸಿರುವ ಮಾಹಿತಿ ಅಂದಾಜಿನ ಪ್ರಕಾರ ಲಾಕ್ ಡೌನ್ ನಂತರ ರೈತರಿಗೆ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ನಷ್ಟವಾಗಿದೆ. ಮೈಸೂರು ಜಿಲ್ಲೆ ಒಂದರಲ್ಲೇ ಬಾಳೆ, ಹೂ.ಟೊಮ್ಯಾಟೋ, ಭತ್ತ  ಉತ್ಪನ್ನಗಳಿಗೆ ಒಂದು ಸಾವಿರದ ಆರು ನೂರು ಕೋಟಿ ರೂ. ರೈತರಿಗೆ ನಷ್ಟವಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹಣ್ಣು-ತರಕಾರಿ, ಹೂ. ಅರಿಶಿನ, ಶುಂಠಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದು ಮಾರುಕಟ್ಟೆ ಇಲ್ಲದೆ ಈಗಿನ ವರದಿ ಪ್ರಕಾರ ಸುಮಾರು ಒಂದು ಲಕ್ಷ ಕೋಟಿ ರೂ.ಗಳಷ್ಟು ನಷ್ಟವನ್ನು ರಾಜ್ಯದ ರೈತರು ಅನುಭವಿಸಿದ್ದಾರೆ ಎಂದರು.

ಭತ್ತ ಕಟಾವು ಆಗಿದೆ. ಕೂಡಲೇ ಸರ್ಕಾರ ಭತ್ತ ಬೆಳೆಯುವ ಎಲ್ಲಾ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆದು ಕನಿಷ್ಠ ಬೆಂಬಲ ಬೆಲೆಯಲ್ಲಿ ಪೂರ್ಣವಾಗಿ ಕೊಳ್ಳಬೇಕೆಂದು ಆಗ್ರಹಿಸಿದರು.

ಈಗಾಗಲೇ ಖರೀದಿ ಕೇಂದ್ರಗಳ ಮೂಲಕ ಖರೀದಿಸಲಾಗಿರುವ ಭತ್ತ, ರಾಗಿ, ಜೋಳ ಇತರೆ ಉತ್ಪನ್ನ  ಗಳ ಹಣವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: