ಕರ್ನಾಟಕಪ್ರಮುಖ ಸುದ್ದಿ

ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಬ್ಯಾಂಕ್ ಸೇವೆ

ರಾಜ್ಯ( ಮಡಿಕೇರಿ) ಮೇ 29:- ಇತ್ತೀಚಿನ ದಿನಗಳಲ್ಲಿ ರಾಷ್ಟ್ರ/ ರಾಜ್ಯ ಹಾಗೂ ಜಿಲ್ಲೆಯ ಜನರನ್ನ ಕಂಗೆಡಿಸಿರುವ ಕೊರೊನಾ ವೈರಸ್‍ನ ಎರಡನೇ ಅಲೆಯ ಸೋಂಕು ಹರಡದಂತೆ ಸರಕಾರ ಹಲವಾರು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮುಂದುವರೆದು, ರಾಜ್ಯ ಸರಕಾರವು ಹೊರಡಿಸಿರುವ ಹೊಸ ಕೋವಿಡ್ 19 ಮಾರ್ಗಸೂಚಿಯಂತೆ ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳ ಶಾಖೆಗಳು, ವಲಯ/ ಕ್ಷೇತ್ರೀಯ ಕಾರ್ಯಾಲಯಗಳಿಗೆ ಜಾರಿಗೊಳಿಸಲಾದ ಬ್ಯಾಂಕುಗಳ ಪರಿಷ್ಕೃತ ಸಮಯ ಬದಲಾವಣೆಯಾಗಿದೆ.

ಬ್ಯಾಂಕಿಂಗ್ ವ್ಯವಹಾರದ ಸಮಯ ವಾರದ ಎಲ್ಲಾ ದಿನಗಳಲ್ಲಿ(ಭಾನುವಾರ ಹೊರತುಪಡಿಸಿ) ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಕೆಲಸದ ಸಮಯವು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ (ಆಡಳಿತ ಕಚೇರಿಗಳು ಸೇರಿದಂತೆ). ಈ ಪರಿಷ್ಕೃತ ಸಮಯದ ವ್ಯವಸ್ಥೆಯು ಜೂನ್ 1 ರಿಂದ 5 ರ ವರೆಗೆ ಇದ್ದು, ಜೂನ್ 7 ರಂದು ಅಂದಿನ ಸ್ಥಿತಿಗತಿಗಳನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿ ತಿಳಿಸಿದೆ.

ಬ್ಯಾಂಕುಗಳಲ್ಲಿ ನಡೆಯುತ್ತಿರುವ ಆಧಾರ್ ನೋಂದಣಿ ಕೇಂದ್ರಗಳ ಸೇವೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ. ಶಾಖೆಗಳು ಕೇವಲ ಮೂಲಭೂತ ಬ್ಯಾಂಕಿಂಗ್ ಸೇವೆಗಳಾದ ನಗದು ವ್ಯವಹಾರಗಳು, ಕ್ಲಿಯರಿಂಗ್ ಸೇವೆಗಳು, ಹಣ ವರ್ಗಾವಣೆ, ಸರಕಾರಿ ವ್ಯವಹಾರಗಳು ಹಾಗೂ ಹೊಸ ಬೆಳೆಸಾಲಗಳ (ಕೆ.ಸಿ.ಸಿ) ಮಂಜೂರಾತಿ/ ನವೀಕರಣಕ್ಕಾಗಿ ಮಾತ್ರ ತೆರೆದಿರುತ್ತದೆ.
ಗ್ರಾಹಕರು ಡಿಜಿಟಲ್ ಸೇವೆಗಳಾದ ಎಟಿಎಂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಸೇವೆಗಳನ್ನು ಉಪಯೋಗಿಸಿಕೊಂಡು ಬ್ಯಾಂಕುಗಳಿಗೆ ಭೇಟಿ ನೀಡುವ ಸಂದರ್ಭವನ್ನು ಕಡಿಮೆಗೊಳಿಸಲು ಕೋರಲಾಗಿದೆ.
ಬ್ಯಾಂಕಿಂಗ್ ಮಿತ್ರರ ಸೇವೆಗಳನ್ನು (ಅಂಚೆ ಕಚೇರಿಯ ಬ್ಯಾಂಕ್ ಮಿತ್ರರ ಸೇವೆಯೂ ಸೇರಿ) ಆಯಾಯ ಗ್ರಾಮಗಳಲ್ಲಿ ಲಭ್ಯವಿರುವುದರಿಂದ ಗ್ರಾಹಕರು ತಮ್ಮ ತಮ್ಮ ಗ್ರಾಮಗಳಲ್ಲಿ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.
ಸಾರ್ವಜನಿಕರು ಬ್ಯಾಂಕಿಂಗ್ ವ್ಯವಹಾರಗಳಿಗಾಗಿ ಶಾಖೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮುಖಗವಸುಗಳನ್ನು ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಇತರ ಕೋವಿಡ್ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಮನವಿ ಮಾಡಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: