ಮೈಸೂರು

ಕೋವಿಡ್‌-19ನಿಂದ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಲು ಮೈಸೂರು ವಿವಿ ನಿರ್ಧಾರ

ಮೈಸೂರು,ಮೇ.28:-  ಕೋವಿಡ್‌-19ನಿಂದ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಲು ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಶುಕ್ರವಾರ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಮೈಸೂರಿನ ಮಹಾರಾಜ ಕಾಲೇಜು, ಯುವರಾಜ ಕಾಲೇಜು, ವಿಶ್ವವಿದ್ಯಾಲಯದ ಸಂಜೆ ಕಾಲೇಜು, ಲಲಿತಕಲೆಗಳ ಕಾಲೇಜುಗಳಲ್ಲಿ ತಲಾ ಐವರಿಗೆ ಪ್ರವೇಶ ನೀಡಲಾಗುವುದು.

ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಾದ ಮೈಸೂರಿನ ಮಾನಸಗಂಗೋತ್ರಿ, ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ ಹಾಗೂ ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಗಳಲ್ಲಿ ತಲಾ ಮೂವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರವೇಶ ನೀಡಲಾಗುವುದು.

ಕೋವಿಡ್-19 ವೈರಾಣು ಜಗತ್ತಿನಾದ್ಯಂತ 2019ನೇ ವರ್ಷದ ಅಂತ್ಯದಲ್ಲಿ ಆರಂಭಗೊಂಡು ಅದರ ಮೊದಲನೆಯ ಅಲೆಯು 2020ರಲಿ, ಜಾಗತಿಕವಾಗಿ ವಿಸ್ತರಣೆಗೊಂಡು ಪಾಶ್ವಿಮಾತ್ಯ ರಾಷ್ಟ್ರಗಳೂ ಸೇರಿದಂತೆ ನಮ್ಮ ದೇಶದಲ್ಲಿ ಅನೇಕ ಜನರ ಸಾವು-ನೋವು ಮತ್ತು ಹಾನಿಯನ್ನು ಉಂಟುಮಾಡಿದೆ.

ವೈರಾಣುವಿನ ಮೊದಲನೇ ಅಲೆಯ ಹರಡುವಿಕೆಯು 2020ರ ಅಕ್ಟೋಬರ್ /ನವೆಂಬರ್ ನಲ್ಲಿ ಕ್ಷೀಣಿಸಿದರೂ ಅದರ ಎರಡನೇ ಅಲೆಯು 2021ರ ಮಾರ್ಚ್ ತಿಂಗಳಿನಲ್ಲಿ ದೇಶದಾದ್ಯಂತ ತೀವ್ರಗತಿಯಲ್ಲಿ ವಿಸ್ತರಿಸಿದೆ. ಭಾರತ ಸರ್ಕಾರವು ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಈ ಅಲೆಯ ತೀವ್ರಗತಿಯನ್ನು ತಪ್ಪಿಸಲು ಅನೇಕ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ 2ನೇ ಆಲೆಯಿಂದ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಸಾವು- ನೋವು ಉಂಟಾಗಿ ಅನೇಕರು ತಂದೆ ತಾಯಿ ಹಾಗೂ ಮಕ್ಕಳನ್ನು ಕಳೆದುಕೊಂಡಿರುತ್ತಾರೆ.
ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ವಿದ್ಯಾರ್ಜನೆ ಮುಂದುವರಿಸಲು ಕಷ್ಟಸಾಧ್ಯವಾಗಿದೆ. ಈ ಜಾಗತಿಕ ಸಂಕಷ್ಟದ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಈ ರೀತಿ ತಂದೆ ತಾಯಂದಿರನ್ನು ಅಥವಾ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡ ಮುಖ್ಯಸ್ಥರನ್ನು ಕಳೆದುಕೊಂಡು ವಿದ್ಯಾರ್ಜನೆ ಮುಂದುವರೆಸಲು ಸಾಧ್ಯವಾಗದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅವರ ಬದುಕಿನ ಭವಿಷ್ಯವನ್ನು ರೂಪಿಸಲು ಪ್ರಸ್ತಾವನೆಯನ್ನು ತಯಾರಿಸಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: