ಮೈಸೂರು

ಕಾವೇರಿ ವಿವಾದದ ನಿರ್ಣಾಯಕ ಹಂತದಲ್ಲಿ ರಾಜ್ಯದ ಪರ ವಕೀಲರು ಮೌನ ವಹಿಸಿದ್ದು ಯಾಕೆ?: ಜಿ. ಮಧುಸೂದನ್ ಪ್ರಶ್ನೆ

ಮೈಸೂರು: ಕಾವೇರಿ ಜಲಹಂಚಿಕೆ ಪ್ರಕರಣದಲ್ಲಿ ಸುಪ್ರೀಮ್‍ ಕೋರ್ಟ್‍ ತೀರ್ಪು ದುರದೃಷ್ಟಕರ ಎಂದು ರಾಜ್ಯ ಬಿಜೆಪಿ ವಕ್ತಾರ ಜಿ. ಮಧುಸೂದನ್ ತಿಳಿಸಿದ್ದಾರೆ.

ಅಂತಾರಾಜ್ಯ ವಿವಾದವಾಗಿರುವ ಈ ಪ್ರಕರಣದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯ ವಿಚಾರ ಸಾಂವಿಧಾನಿಕ ಪೀಠದ ಮುಂದಿದೆ. ಹೀಗಿರುವಾಗ ಸರ್ವೋಚ್ಚ ನ್ಯಾಯಾಲವು ತನ್ನ ವ್ಯಾಪ್ತಿಗೆ ಮೀರಿ ಆದೇಶ ನೀಡಲು ಹೇಗೆ ಸಾಧ್ಯ? ಎಂದು ಮಧುಸೂದನ್ ಅವರು ಪ್ರಶ್ನಿಸಿದ್ದಾರೆ.

ನಿರ್ಣಾಯಕ ಹಂತದಲ್ಲಿ ಕರ್ನಾಟಕ ಸರ್ಕಾರದ ಪರ ವಕೀಲರ ತಂಡ ಮೌನ ವಹಿಸಿದ್ದರಿಂದಲೇ ನ್ಯಾಯಾಲಯ ಇಂತಹ ಆದೇಶ ನೀಡಲು ಸಾಧ್ಯವಾಗಿದೆ.  ಹಿರಿಯ ವಕೀಲರಾದ ನಾರಿಮನ್ ಅವರ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ಕಳವಳಪಟ್ಟಿದ್ದಾರೆ.

ಕರ್ನಾಟಕದ ಕುಡಿಯುವ ನೀರಿನ ಅಗತ್ಯಕ್ಕೂ ನೀರಿಲ್ಲದ ಸಮಯದಲ್ಲಿ ಮತ್ತೆ ನೀರು ಬಿಡುಗಡೆ ಮಾಡುವಂತೆ ಸುಪ್ರೀಮ್‍ ಕೋರ್ಟ್‍ ಆದೇಶ ನೀಡಿದೆ. ರಾಜ್ಯದ ವಕೀಲರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸದ ಕಾರಣ ಕರ್ನಾಟಕ ಮತ್ತೆ ಅನ್ಯಾಯಕ್ಕೆ ಈಡಾಗಿದೆ. ವಕೀಲರಿಗೆ ಸರಿಯಾದ ಮಾಹಿತಿ ಒದಗಿಸುವಲ್ಲಿ ಮತ್ತು ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಧುಸೂದನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸುಪ್ರಿಮ್‍ಕೋರ್ಟ್‍ ನಿರ್ದೇಶನದಂತೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಎರಡೂ ರಾಜ್ಯಗಳ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ ಎರಡೂ ರಾಜ್ಯಗಳೂ ತಮ್ಮ ನಿಲುವಿಗೆ ಅಂಟಿಕೊಂಡ ಪರಿಣಾಮ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ವಿಷಯದಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯೇ ಹೆಚ್ಚು. ಸದ್ಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಪೀಠವನ್ನು ಬದಲಿಸಲು ಕೋರಿಕೆ ಸಲ್ಲಿಸುವಂತೆ ಸೆ.28ರ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ರಾಜ್ಯ ಸರ್ಕಾರಕ್ಕೆ ಸಲಹೆ ರೂಪದ ಮನವಿ ಮಾಡಿತ್ತು. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರ ಸೇರಿದಂತೆ ನೀರು ಬಿಡುಗಡೆಗೆ ಅಡ್ಡಿಯಾಗಿರುವ ರಾಜ್ಯದ ಬರ ಪರಿಸ್ಥಿತಿಯ ವಿವರಗಳನ್ನು ತಕ್ಷಣ ಸಾಂವಿಧಾನಿಕ ಪೀಠಕ್ಕೆ ಸಲ್ಲಿಸಬೇಕೆಂಬ ಬಿಜೆಪಿ ಸಲಹೆಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಸ್ಪಂದಿಸಲಿಲ್ಲ. ಹೀಗಾಗಿ ರಾಜ್ಯಕ್ಕೆ ನಿರ್ಣಾಯಕ ಸಂದರ್ಭದಲ್ಲಿ ಸೋಲುಂಟಾಗಿ ರಾಜ್ಯದ ರೈತರ ಮತ್ತು ಜನತೆಯ ಹಿತವನ್ನು ಬಲಿಕೊಟ್ಟಂತಾಗಿದೆ ಎಂದು ಮಧುಸೂದನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೀಗಿದ್ದಾಗ್ಯೂ ಮುಖ್ಯಮಂತ್ರಿಗಳು ಶನಿವಾರ ಕರೆದಿರುವ ಸರ್ವಪಕ್ಷ ಸಭೆಗೆ ಪಕ್ಷದ ಪ್ರತಿನಿಧಿಗಳು ಹಾಜರಾಗಲಿದ್ದು, ರಾಜ್ಯ ಬಿಜೆಪಿ ಘಟಕವು ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ. ರಾಜ್ಯ ರೈತರು ಮತ್ತು ಜನತೆಯ ಕುಡಿಯವ ನೀರಿನ ಅಗತ್ಯವನ್ನು ಪೂರೈಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

Leave a Reply

comments

Related Articles

error: