ಮೈಸೂರು

ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ: ಮಾರುಕಟ್ಟೆಯಲ್ಲಿ ಜನಜಂಗುಳಿ; ಸಾಮಾಜಿಕ ಅಂತರ ಮಾಯಾ

ಮೈಸೂರು,ಮೇ 31-ಕೊರೊನಾ ಭೀತಿಯನ್ನು ಮರೆತು ಸಾರ್ವಜನಿಕರು ಅಗತ್ಯ ವಸ್ತು ಖರೀದಿಗಾಗಿ ಇಂದು ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಸಾಮಾಜಿಕ ಅಂತರವೂ ಮಾಯವಾಗಿದೆ.

ಸೋಂಕಿನ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಮೇ 29 ರಿಂದ ಜೂನ್ 7 ರವರೆಗೆ 10 ದಿನಗಳ ಸಂಪೂರ್ಣ ಲಾಕ್ ಡೌನ್ ಅನ್ನು ಜಿಲ್ಲಾದ್ಯಂತ ಘೋಷಿಸಿದೆ. ಈ ವೇಳೆ ವಾರದಲ್ಲಿ ಎರಡು ದಿನ ಅಂದರೆ ಸೋಮವಾರ, ಗುರುವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

ಅದರಂತೆ ಇಂದು ಸೋಮವಾರವಾಗಿರುವುದರಿಂದ ಸಾರ್ವಜನಿಕರು ಅಗತ್ಯ ವಸ್ತು ಖರೀದಿಗಾಗಿ ಮಾರುಕಟ್ಟೆಗೆ ದೌಡಾಯಿಸಿದ್ದಾರೆ. ಕೊರೊನಾ ಭೀತಿಯನ್ನು ಮರೆತು, ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿ ಖರೀದಿಯಲ್ಲಿ ತೊಡಗಿದ್ದಾರೆ. ಇದರಿಂದ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ.

ಇದರಿಂದ ನಗರದಲ್ಲಿ ಜನದಟ್ಟಣೆ, ವಾಹನ ಸಂಚಾರ ಹೆಚ್ಚಾಗಿದೆ. ನಗರದ ದೇವರಾಜ ಮಾರುಕಟ್ಟೆ, ಶಿವರಾಂ ಪೇಟೆ, ಸಂತೇಪೇಟೆ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಹಲವೆಡೆ ಸಾರ್ವಜನಿಕರು ಖರೀದಿಗಾಗಿ ಮುಗಿಬಿದ್ದಿದ್ದಾರೆ. ಕೆಲವರು ತಂತಮ್ಮ ಬಡಾವಣೆಗಳಲ್ಲಿರುವ ಅಂಗಡಿಗಳಲ್ಲೇ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಲಾಕ್ ಡೌನ್ ವೇಳೆ ಹಾಲಿನ ಬೂತ್, ವೈದ್ಯಕೀಯ ಸೇವೆ, ಹಾಪ್ ಕಾಮ್ಸ್ ಗೆ ಒಳಪಡುವ ಹಣ್ಣು-ತರಕಾರಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: