ದೇಶಪ್ರಮುಖ ಸುದ್ದಿ

ಲಕ್ಷ ದ್ವೀಪದ ಜನರಿಗೆ ಬೆಂಬಲವಾಗಿ ನಿರ್ಣಯ ಮಂಡಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ತಿರುವನಂತಪುರ,ಮೇ 31-ಲಕ್ಷದ್ವೀಪದ ಆಡಳಿತಾಧಿಕಾರಿ ಕೈಗೊಂಡಿರುವ ಕ್ರಮಗಳ ವಿರುದ್ಧ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಅಲ್ಲಿನ ಜನರಿಗೆ ಬೆಂಬಲ ನೀಡುವ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು.

ದ್ವೀಪಸಮೂಹದ ಸ್ಥಳೀಯ ನಿವಾಸಿಗಳ ಜೀವನಶೈಲಿ ಮತ್ತು ಪರಿಸರ ವ್ಯವಸ್ಥೆಯನ್ನು ನಾಶಮಾಡುವ ಮತ್ತು ಹಿಂಬಾಗಿಲಿನ ಮೂಲಕ ‘ಕೇಸರಿ ಪಡೆಯ ಕಾರ್ಯಸೂಚಿಯನ್ನು’ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ಸ್ಥಳೀಯ ಜನರ ಜೀವನದ ಹಕ್ಕನ್ನು ನಿಯಂತ್ರಿಸಲಾಗುತ್ತಿದೆ ಎಂದು ನಿರ್ಣಯ ಮಂಡಿಸುವ ಸಂದರ್ಭದಲ್ಲಿ ಅವರು ಹೇಳಿದರು.

ತಮ್ಮ ಅಜೆಂಡಾದ ಭಾಗವಾಗಿ ತೆಂಗಿನ ಮರಗಳನ್ನು ಕೇಸರಿ ಬಣ್ಣದಿಂದ ಚಿತ್ರಿಸಲಾಗಿದೆ. ಈ ಪ್ರಯತ್ನಗಳು ಲಕ್ಷದ್ವೀಪದಲ್ಲಿ ತಮ್ಮ ಕೇಸರಿ ಅಜೆಂಡ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಒತ್ತಾಯಪೂರ್ವಕವಾಗಿ ಹೇರುವುದಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಲಕ್ಷದ್ವೀಪದಲ್ಲಿ ಕೇಸರಿ ಕಾರ್ಯಸೂಚಿ ಮತ್ತು ಸಾಂಸ್ಥಿಕ ಹಿತಾಸಕ್ತಿಗಳನ್ನು ಹೇರಲು ಮತ್ತು ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದರು. ಕೇಂದ್ರ ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಕು, ಲಕ್ಷದ್ವೀಪ ಜನರ ಹಿತಾಸಕ್ತಿ ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.

ಕಳೆದ ತಿಂಗಳು ಏಪ್ರಿಲ್ 6ರಂದು ನಡೆದ ವಿಧಾಸಭೆ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರ ಬಂದ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮೇಲೆ ವಿಧಾನಸಭೆಯಲ್ಲಿ ಮಂಡಿಸಲಾದ ಮೊದಲ ನಿರ್ಣಯವಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: