ಮೈಸೂರು

ಮನಪಾ ಸಿಬ್ಬಂದಿಗಳು,ಪೌರಕಾರ್ಮಿಕರು ಕೊರೋನಾ ಸೋಂಕಿಗೆ ಒಳಗಾದ ವೇಳೆ ಅಗತ್ಯ ಸೌಲಭ್ಯ ಒದಗಿಸುವಂತೆ ಮನವಿ

ಮೈಸೂರು,ಜೂ.2:- ನಗರಾಭಿವೃದ್ಧಿ ಇಲಾಖೆಯ ರಾಜ್ಯದ ಮಹಾನಗರ ಪಾಲಿಕೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ಅವರ ಕುಟುಂಬದವರು ಕೋವಿಡ್ 19 ಸೋಂಕಿಗೆ ತುತ್ತಾದಾಗ ನಿಯಮಾನುಸಾರ ಅವರಿಗೆ ಅಗತ್ಯ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮನಪಾ ನೌಕರರ ಸಂಘಗಳ ಪರಿಷತ್ ಸಿಎಂ ಗೆ ಮನವಿ ಸಲ್ಲಿಸಿದೆ.

ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆ, ಮಹಾನಗರಪಾಲಿಕೆಗಳು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅತ್ಯಗತ್ಯ ಸೇವೆಗಳನ್ನು ಒದಗಿಸುವ ಇಲಾಖೆಯಾಗಿದ್ದು ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದಿಂದ ಕಾಲಕಾಲಕ್ಕೆ ಸೂಚಿಸಿ ಆದೇಶಿಸುವ ಪ್ರಕಾರ ಸಾರ್ವಜನಿಕರಿಗೆ ಅತ್ಯಗತ್ಯ ಸೇವೆಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

ಆದರೆ ಕರ್ತವ್ಯ ನಿರ್ವಹಿಸುವ ಸಂದರ್ಭ ಕೋವಿಡ್- ಸೋಂಕಿಗೆ ತುತ್ತಾಗಿ ಅಗತ್ಯ ವೈದ್ಯಕೀಯ ಸೇವೆ ಸಿಗದೆ ಮರಣ ಹೊಂದಿರುವ ಪ್ರಕರಣಗಳು ಹೆಚ್ಚುತ್ತಿವೆ. ಅದಕ್ಕಾಗಿ ಪೌರಕಾರ್ಮಿಕರು ಯುಜಿಡಿ ಸಹಾಯಕರು, ನೀರು ಸರಬರಾಜು ವಾಲ್ವ್ ಮನ್, ಆಪರೇಟರ್, ಹಾಗೂ ಇತರೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್ ಗಳನ್ನು ನೀಡಬೇಕು.

ಪಾಲಿಕೆಗಳ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿ ಪಾಲಿಕೆಯ ಅಧಿಕಾರಿ/ನೌಕರರು/ಪೌರಕಾರ್ಮಿಕರು ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ನೌಕರರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೋವಿಡ್-19 ಸೋಂಕಿನ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಬೆಡ್(ಆಕ್ಸಿಜನ್ ಸಹಿತ) ಗಳನ್ನು ಕಾಯ್ದಿರಿಸಬೇಕು.  ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ವೆಚ್ಚವನ್ನು ಮರುಪಾವತಿ ಮಾಡಲು ಅರ್ಜಿ ಸಲ್ಲಿಸಿ ಒಂದು ತಿಂಗಳ ಒಳಗಾಗಿ  ಮರುಪಾವತಿ ಮಾಡುವಂತೆ ಆಯಾ ಪಾಲಿಕೆಯ ಆಯುಕ್ತರಿಗೆ ಅಧಿಕಾರ ನೀಡಲು ಸೂಕ್ತ ಆದೇಶ ಹೊರಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದೆ. ರಾಜ್ಯಾಧ್ಯಕ್ಷ ಎಸ್.ಹೆಚ್.ಗುರುಮೂರ್ತಿ ನೇತೃತ್ವದಲ್ಲಿ ಮನವಿ ನೀಡಲಾಗಿದೆ. (ಕೆ.ಎಸ್, ಎಸ್ಎಚ್)

Leave a Reply

comments

Related Articles

error: