ಸುದ್ದಿ ಸಂಕ್ಷಿಪ್ತ

ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಅರ್ಜಿ ಆಹ್ವಾನ

ರಾಜ್ಯ( ಮಡಿಕೇರಿ) ಜೂ,3:- ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು, ಪ್ರಧಾನಮಂತ್ರಿ ಅವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (PMFME)ಯನ್ನು ಹೊಸದಾಗಿ ಪ್ರಾರಂಭಿಸುತ್ತಿದೆ.
ಈ ಯೋಜನೆಯ ಮೂಲ ಉದ್ದೇಶವು ಅಹಾರ ಸಂಸ್ಕರಣೆಯ ಅಸಂಘಟಿತ ಅತೀ ಸಣ್ಣ ಉದ್ಯಮ ಕ್ಷೇತ್ರದ ಕೊಡುಗೆ ಹಾಗೂ ಅವುಗಳ ಕಾರ್ಯಕ್ಷಮತೆಗೆ ತೊಡಕಾಗುತ್ತಿರುವ ಸವಾಲುಗಳನ್ನು ಗಣನೆಗೆ ತೆಗೆದುಕೊಂಡು, ಅತೀ ಸಣ್ಣ ಉದ್ಯಮಗಳು ಸಾಮಾನ್ಯ ಸೇವೆಗಳನ್ನು ಪಡೆದುಕೊಳ್ಳುವಂತೆ ಉತ್ತೇಜಿಸುವುದು. ಈ ಯೋಜನೆಯ ಅನುಷ್ಠಾನಕ್ಕೆ ಕೃಷಿ ಇಲಾಖೆಯು ನೋಡಲ್ ಇಲಾಖೆಯಾಗಿದೆ.
ಈ ಯೋಜನೆಯಡಿ, ವೈಯುಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣ, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಉತ್ಪಾದಕರ ಸಹಕಾರ ಸಂಘಗಳು ಹಾಗೂ ಸಹಕಾರ ಸೊಸೈಟಿಗಳಿಗೆ ಬಂಡವಾಳ ಹೂಡಿಕೆ, ಸಾಮಾನ್ಯ ಮೂಲಭೂತ ಸೌಕರ್ಯಕ್ಕಾಗಿ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆಗೆ ಬೆಂಬಲ ನೀಡಲಾಗುತ್ತದೆ.
ಕಚ್ಚಾ ವಸ್ತುಗಳ ಸಂಗ್ರಹ, ಸಾಮಾನ್ಯ ಸೇವೆಗಳನ್ನು ಪಡೆಯುವುದು ಹಾಗೂ ಉತ್ಪನ್ನಗಳ ಮಾರ್ಕೆಟಿಂಗ್ ವಿಷಯಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಲಾಭವನ್ನು ಪಡೆಯಲು ಒಂದು ಜಿಲ್ಲೆ ಒಂದು ಉತ್ಪನ್ನ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಕೊಡಗು ಜಿಲ್ಲೆಯಲ್ಲಿ ವಿಸ್ತಾರವಾಗಿ ಉತ್ಪಾದಿಸಲಾಗುವಂತಹ ಕಾಫಿ ಬೆಳೆಯನ್ನು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಿಲಾಗಿರುತ್ತದೆ.
ಈ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ಫಲಾನುಭವಿಗಳನ್ನು ಗುರುತಿಸುವಿಕೆ, ಯೋಜನಾ ವರದಿ ಸಿದ್ದತೆ, ಫಲಾನುಭವಿಗಳು ಸಾಲ ಪಡೆಯಲು ಬ್ಯಾಂಕ್‍ನೊಂದಿಗೆ ಸಂಪರ್ಕ, ಘಟಕಗಳ ನೋಂದಣಿ ಹಾಗೂ ಕೈ ಆಸರೆ ಬೆಂಬಲ ನೀಡುವುದಕ್ಕೆ ಜಿಲ್ಲಾ ಮಟ್ಟಕ್ಕೆ ನಾಲ್ಕು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಹಾರ ತಂತ್ರಜ್ಞಾನದ/ ಆಹಾರ ಎಂಜಿನಿಯರಿಂಗ್‍ನಲ್ಲಿ ಪ್ರತಿಷ್ಠಿತ ರಾಷ್ಟ್ರ/ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ/ ಸಂಸ್ಥೆಗಳಿಂದ ಡಿಪ್ಲೊಮಾ/ ಪದವಿ ಪಡೆದಿರಬೇಕು. ಇವರಿಗೆ ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ತಂತ್ರಜ್ಞಾನ ಉನ್ನತೀಕರಣ, ಹೊಸ ಉತ್ಪನ್ನ ಅಭಿವೃದ್ಧಿ, ಗುಣಮಟ್ಟದ ಖಾತ್ರಿ, ಆಹಾರ ಭದ್ರತಾ ನಿರ್ವಹಣೆಗಾಗಿ ಸಲಹಾ ಸೇವೆಗಳನ್ನು ಒದಗಿಸಿದ ಅನುಭವವಿರಬೇಕು. ಕನ್ನಡ ಭಾಷಾ ಜ್ಞಾನ ಹೊಂದಿರುವ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆ/ ಬ್ಯಾಂಕಿಂಗ್, ಡಿಪಿಆರ್ ಸಿದ್ದಪಡಿಸುವಿಕೆಯಲ್ಲಿ ಹಾಗೂ ತರಬೇತಿಯಲ್ಲಿ ಅನುಭವುಳ್ಳ ವ್ಯಕ್ತಿಗಳಿಗೆ ಮೊದಲ ಅದ್ಯತೆ. ಸಂಪನ್ಮೂಲ ವ್ಯಕ್ತಿಗಳಿಗೆ ನೀಡಲಾಗುವ ಹಣ ಪಾವತಿಯನ್ನು ಅವರು ಬೆಂಬಲಿಸಿದಂತಹ ಪ್ರತಿ ಫಲಾನುಭವಿಯನ್ನು ಆಧರಿಸಿ, ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಬ್ಯಾಂಕಿನಿಂದ ಮಂಜೂರಾದ ಪ್ರತಿ ಸಾಲವನ್ನು ಆಧರಿಸಿ ರೂ. 20 ಸಾವಿರ ಗಳನ್ನು 2 ಕಂತುಗಳಲ್ಲಿ ಪಾವತಿಸಲಾಗುವುದು.

ಈ ಪೈಕಿ ಶೇ.50 ಮೊತ್ತವನ್ನು ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಹಾಗೂ ಉಳಿದ ಶೇ.50 ಹಣವನ್ನು ಘಟಕಗಳು ಜಿಎಸ್‍ಟಿ ಮತ್ತು ಆಧಾರ ನೋಂಣಿಯನ್ನು ಪಡೆದ ನಂತರ FSSAI ವತಿಯಿಂದ ಪ್ರಮಾಣೀಕೃತ ಅನುಸರಣೆಯನ್ನು ಪಡೆದ ನಂತರ ನೀಡಲಾಗುವುದು. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವಿಕೆಗೆ ಜೂನ್ 15 ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು/ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Leave a Reply

comments

Related Articles

error: