ಮೈಸೂರು

ಮೈಸೂರು ನಗರ ಶ್ವಾನದಳದಲ್ಲಿ ಮಾದಕ ವಸ್ತು ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಶ್ವಾನ ನಿವೃತ್ತಿ ; ಬೀಳ್ಕೊಡುಗೆ

ಮೈಸೂರು,ಜೂ.3:- ಮೈಸೂರು ನಗರ ಶ್ವಾನದಳದಲ್ಲಿ ಮಾದಕ ವಸ್ತು ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಎಂಬ ಶ್ವಾನದ ವಯೋನಿವೃತ್ತಿ ಹೊಂದಿದ್ದು, ಅಧಿಕಾರಿ ಮತ್ತು ಸಿಬ್ಬಂದಿಯವರುಗಳು  ಆತ್ಮೀಯ ಬೀಳ್ಕೊಡುಗೆ ನೀಡಿದರು.

ಮೈಸೂರು ನಗರ ಶ್ವಾನದಳದಲ್ಲಿ ಮಾದಕ ವಸ್ತು ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ ಎಂಬ ಶ್ವಾನವು ಸೂಕ್ತ ತರಬೇತಿಯೊಂದಿಗೆ  04-04-2011ರಿಂದ ಇಲಾಖೆಗೆ ಸೇರಿದ್ದು, ಈ ಶ್ವಾನವು ಕರ್ತವ್ಯದ ಜೊತೆಯಲ್ಲಿ 2015 ರಿಂದ 2019 ವರೆಗೆ ನಡೆದ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದ ಮಾದಕ ವಸ್ತುಗಳ ಪತ್ತೆ ಕಾರ್ಯದಲ್ಲಿ ಸ್ಪರ್ಧಿಸಿ ಸತತವಾಗಿ ಚಿನ್ನದ ಪದಕ ಪಡೆದು ಈ 5 ವರ್ಷಗಳಲ್ಲಿ ದಕ್ಷಿಣ ವಲಯದ ಅತ್ಯುತ್ತಮ ಶ್ವಾನ ಎಂಬ ಕೀರ್ತಿಗೆ ಪಾತ್ರವಾಗಿರುತ್ತದೆ.

2017ನೇ ಸಾಲಿನಲ್ಲಿ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದ ಮಾದಕ ವಸ್ತು ಪತ್ತೆ ಕಾರ್ಯದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಪಡೆದು ಮೈಸೂರು ನಗರ ಘಟಕಕ್ಕೆ ಕೀರ್ತಿ ತಂದಿರುತ್ತದೆ. ಹಾಗೆಯೇ 2017ನೇ ಸಾಲಿನ ಚೆನೈನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೈಸೂರು ನಗರ ಘಟಕದ ವತಿಯಿಂದ ಪ್ರತಿನಿಧಿಯಾಗಿ ಭಾಗವಹಿಸಿರುತ್ತದೆ.

2016 ಮತ್ತು 2017ರಲ್ಲಿ ಮೈಸೂರು ನಗರದ ಮಂಡಿ ಪೊಲೀಸ್ ಠಾಣೆಯ ಸರಹದ್ದಿನ ಬಡೆಮಖಾನ್ ಮತ್ತು ಬನ್ನಿಮಂಟಪ ಸ್ಥಳದಲ್ಲಿ ಮಾದಕ ವಸ್ತು ಇರುವಿಕೆಯ ಬಗ್ಗೆ ಶ್ವಾನವು ಪರಿಶೀಲಿಸಿ ಮಹತ್ವದ ಸುಳಿವು ನೀಡಿರುತ್ತದೆ. ಅಲ್ಲದೇ ಆಗಾಗ್ಗೆ ನಗರದ ಕೇಂದ್ರಕಾರಾಗೃಹದಲ್ಲಿ ಮಾದಕ ವಸ್ತು ತಪಾಸಣೆ ಕಾರ್ಯ ನಿರ್ವಹಿಸಿರುತ್ತದೆ. ಈ ಶ್ವಾನದ ತರಬೇತುದಾರರಾದ  ಎಂ. ಬಲರಾಮನ್ ಎಹೆಚ್‌ಸಿ 25 ರವರ ಮಾರ್ಗದರ್ಶನದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿರುತ್ತದೆ.

ಈ ಶ್ವಾನವು ಇಲಾಖೆಯಲ್ಲಿ ಸುಮಾರು 10 ವರ್ಷ 1 ತಿಂಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿ  03- 06-2021 ರಂದು ವಯೋ ನಿವೃತ್ತಿ ಹೊಂದಿರುತ್ತದೆ. ಈ ಶ್ವಾನಕ್ಕೆ ಇಲಾಖಾ ವತಿಯಿಂದ ಗೌರವದೊಂದಿಗೆ ಪ್ರಾಣಿ ದಯಾ ಸಂಘಕ್ಕೆ ಹಸ್ತಾಂತರಿಸಲಾಗಿದೆ. ಈ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ  ಶಿವರಾಜು, ಡಿಸಿಪಿ, ಸಿಎಆರ್ ಕೇಂದ್ರಸ್ಥಾನ,  ಸುದರ್ಶನ.ಎನ್. ಸಹಾಯಕ ಪೊಲೀಸ್ ಆಯುಕ್ತರು, ಶ್ವಾನದಳದ ಉಸ್ತುವಾರಿ ಅಧಿಕಾರಿ  ಮೂರ್ತಿ.ಕೆ.ಎಂ. ಆರಕ್ಷಕ ನೀರಕ್ಷಕರು,  ಸುರೇಶ, ಉಪ ನಿರೀಕ್ಷಕರು ಹಾಗೂ ಶ್ವಾನದಳದ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಈ ಶ್ವಾನವು ಮೈಸೂರು ನಗರ ಶ್ವಾನದಳದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದು ಎಲ್ಲಾರ ಪ್ರೀತಿಯ ನೆಚ್ಚಿನ ಶ್ವಾನವಾಗಿರುತ್ತದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: